ಕುಂದಾಪುರ, ನ 04 (DaijiworldNews/SM): ನೂತನ ಪಿಂಚಣಿ ಯೋಜನೆ (ಎನ್.ಪಿ.ಎಸ್) ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ, ರಾಜ್ಯದಲ್ಲಿ ಏಕರೂಪ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ (ಎನ್.ಪಿ.ಎಸ್) ನೌಕರರ ಸಂಘ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ 2006ರಿಂದ ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಇದು ಷೇರುಮಾರುಕಟ್ಟೆಯ ಆಧಾರಿತವಾಗಿದ್ದು ಮುಂದೆ ನಿವೃತ್ತಿಯ ಬಳಿಕ ಸಮಸ್ಯೆಯಾಗಲಿದೆ. ಈಗಾಗಲೇ (ಎನ್.ಪಿ.ಎಸ್) ನೌಕರರು ಕೊರೋನಾ ಹಾವಳಿಯಿಂದ ಷೇರುಮಾರುಕಟ್ಟೆ ಹೊಡೆತಕ್ಕೆ ಸಿಲುಕಿ ಪ್ರತಿಯೊಬ್ಬರ ಎನ್.ಪಿ.ಎಸ್ ಖಾತೆಯಲ್ಲಿ 50 ಸಾವಿರದಿಂದ 80 ಸಾವಿರದವರೆಗೂ ಕಳೆದುಕೊಂಡಿದ್ದಾರೆ.ಈ ಯೋಜನೆಯ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದಿಂದ ಪ್ರೀಡಂ ಪಾರ್ಕ್ನಲ್ಲಿ ಹೋರಾಟ, ಬೆಳಗಾವಿ ಪಾದಯಾತ್ರೆಗಳನ್ನು ಮಾಡಲಾಗಿದೆ.
ರಾಜ್ಯದಲ್ಲಿ ಒಟ್ಟು 7,41048 ಸರ್ಕಾರಿ ನೌಕರರಿದ್ದು ಅವರಲ್ಲಿ 7,12,521 ಜನ ಹಳೆ ಪಿಂಚಣಿ ಯೋಜನೆಯ ವ್ಯಾಪ್ತಿಯಲ್ಲಿದ್ದು4,28,527 ನೌಕರರು ನೂತನ ಪಿಂಚಣಿ ಯೋನೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಾ ನೂತನ ಪಿಂಚಣಿ ಯೋಜನೆಯನ್ನು ಕಡ್ಡಾಯಗೊಳಿಸಿಲ್ಲ. ಅದು ಆಯ ರಾಜ್ಯಗಳಿಗೆ ಬಿಟ್ಟ ವಿಚಾರವೆಂದು ಹೇಳಿದೆ. ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ನೌಕರರ ನಡುವೆ ವೇತನ, ಪಿಂಚಣಿ ಸಂಬಂಧ ತಾರತಮ್ಯ ಮಾಡುತ್ತಿರುವುದು ಸಂವಿಧಾನ ಆಶಯಕ್ಕೆ ವಿರುದ್ಧವಾಗಿದೆ. ಪ್ರಸ್ತುತ ಸರ್ಕಾರವು ಆರ್ಥಿಕ ಸಂಕಷ್ಟದಿಂದ ಹೊರಬರಲು ಈ ಯೋಜನೆಯನ್ನು ರದ್ದುಗೊಳಿಸುವುದು ಸಹ ಒಂದು ಪರಿಹಾರವಾಗಿದೆ. ಆದ್ದರಿಂದ ಈ ಅವೈಜ್ಞಾನಿಕ ಪಿಂಚಣಿ ಯೋಜನೆಯನ್ನು ಹಿಂಪಡೆದು ಹಳೆ ಪಿಂಚಣಿ (ಎನ್.ಪಿ.ಎಸ್) ಯೋಜನೆಯನ್ನು ಮರುಜಾರಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಪರಿಶೀಲಿಸಿದ ಸಚಿವರು ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಘವ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ರಾಮಚಂದ್ರ ವಾಕುಡ, ಕುಂದಾಪುರ ತಾ|| ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಕವಿಪ್ರನಿನಿ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಘವೇಂದ್ರ ಎಂ ಹಾಗೂ ವಿವಿಧ ಇಲಾಖೆಗಳ ಉದ್ಯೋಗಿಗಳು ಉಪಸ್ಥಿತರಿದ್ದರು.