ಮಂಗಳೂರು, ನ 04 (DaijiworldNews/DB): ತಂಬಾಕು ನಿಯಂತ್ರಣ ಕಾರ್ಯಕ್ರಮಗಳಡಿ ಕೋಟ್ಪಾ-2003ರ ಕಾಯ್ದೆಯ ಕಾರ್ಯಚರಣೆಗಳನ್ನು ಮತ್ತಷ್ಟು ಚುರುಕುಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಕೆ.ಎಚ್. ಅವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನವೆಂಬರ್ 3ರ ಗುರುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂಬಾಕು ಸೇವನೆಯ ದುಷ್ಪರಿಣಾಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ಕೋಟ್ಪಾ ನಿಯಂತ್ರಣ ಸಮನ್ವಯ ಸಮಿತಿಗಳು ಮತ್ತಷ್ಟು ಸಭೆಗಳನ್ನು ನಡೆಸಿ, ಹೆಚ್ಚು ಹೆಚ್ಚು ಕಾರ್ಯಾಚರಣೆ ನಡೆಸಬೇಕು. ಬೀಡಿ, ಸಿಗರೇಟು ಸೇರಿದಂತೆ ಬೇರೆ ಬೇರೆ ರೂಪಗಳಲ್ಲಿ ತಂಬಾಕು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳು ಬರುತ್ತವೆ. ಭವಿಷ್ಯದ ನಾಗರಿಕರಾಗಿರುವ ಮಕ್ಕಳಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದ್ದಲ್ಲಿ ಸಮಾಜದ ಸ್ವಾಸ್ತ್ಯ ಕಾಪಾಡಬಹುದಾಗಿದೆ ಎಂದರು.
ತಂಬಾಕು ಮುಕ್ತ ಶೈಕ್ಷಣಿಕ ವಿದ್ಯಾ ಸಂಸ್ಥೆಯ ಮಾರ್ಗಸೂಚಿಯಂತೆ ಯೇನಪೋಯ ಪರಿಗಣಿತ ವಿಶ್ವವಿದ್ಯಾಲಯವನ್ನು ತಂಬಾಕು ಮುಕ್ತ ಪರಿಗಣಿತ ವಿಶ್ವವಿದ್ಯಾಲಯವೆಂದು ಘೋಷಿಸಲು ಒಪ್ಪಿಗೆ ನೀಡಿದ ಅವರು, ಈ ದಿಸೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನೂ ಸಹ ತಂಬಾಕು ಮುಕ್ತ ವಿಶ್ವ ವಿದ್ಯಾನಿಲಯವೆಂದು ಘೋಷಿಸಲು ಕ್ರಮ ವಹಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ತಂಬಾಕು ಮುಕ್ತ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಜಿಲ್ಲಾ ಸರ್ಜನ್ ನೇತೃತ್ವದಲ್ಲಿ ತನಿಖಾ ದಳ ರಚಿಸುವಂತೆ ತಿಳಿಸಿದರು. ತಾಲೂಕು ಮಟ್ಟದಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ತಮ್ಮ ತಾಲೂಕಿನ ಕನಿಷ್ಠ ಒಂದು ಹಳ್ಳಿಯನ್ನಾದರೂ ತಂಬಾಕು ಮುಕ್ತ ಗ್ರಾಮವನ್ನಾಗಿಸುವತ್ತ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸದಾಶಿವ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳಾದ ಪುಂಡಲೀಕ ಲಕಾಟಿ, ಶ್ರುತಿ ಸಾಲ್ಯಾನ್, ವಿಜಯ್ ಹಾಗೂ ವಿದ್ಯಾ ಉಪಸ್ಥಿತರಿದ್ದರು.