ಉಡುಪಿ, ನ 04 (DaijiworldNews/HR): ಯಾವುದೇ ನಿರ್ಧಾರಕ್ಕೂ ವೈಜ್ಞಾನಿಕ ತಳಹದಿ ಅಗತ್ಯ. ಅದು ಇಲ್ಲದೇ ಜನರಿಗೆ ತೋರಿಕೆಗಾಗಿ ಇಂತದ ಯೋಜನೆ ಮಾಡುವುದು ತಪ್ಪು. ಮಕ್ಕಳ ಮನೋಸ್ಥಿತಿ ಹೀಗಾಗಲು ಕಾರಣ ಏನು ಎಂಬುವುದನ್ನು ಪತ್ತೆ ಹಚ್ಚಿ. ಆನ್ ಲೈನ್ ಶಿಕ್ಷಣದ ಪರಿಣಾಮ ಇದು. ಆನ್ ಲೈನ್ ಶಿಕ್ಷಣ ದಿಂದಾಗಿ ಮಕ್ಕಳಲ್ಲಿ ಮೊಬೈಲ್ ಅಡಿಕ್ಷನ್ ಬಂದಿದೆ ಎಂದು ಖ್ಯಾತ ಮನೋವೈದ್ಯರಾದ ಡಾಕ್ಟರ್ ಪಿವಿ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.
ಶಾಲೆಗಳಲ್ಲಿ ಮಕ್ಕಳಿಗೆ 10 ನಿಮಿಷದ ಧ್ಯಾನ ವನ್ನು ಆಯೋಜಿಸುವ ಕರ್ನಾಟಕ ಸರಕಾರದ ಯೋಜನೆಯ ಕುರಿತು ಪ್ರತಿಕ್ರಿಯಿಸಿದ ಅವರು, ಇದಕ್ಕೆ ವೈಜ್ಞಾನಿಕ ತಳಹದಿ ಇದೆಯಾ? ಆನ್ ಲೈನ್ ಶಿಕ್ಷಣ ದಿಂದಾಗಿ ಮಕ್ಕಳಲ್ಲಿ ಮೊಬೈಲ್ ಅಡಿಕ್ಷನ್ ಬಂದಿದೆ. ಮಕ್ಕಳಲ್ಲಿ ಮನಸ್ಸಿಗೆ ಸಂಭಂದಪಟ್ಟ ಹಲವು ಸಮಸ್ಯೆಗಳು ಆಗುತ್ತಿವೆ. ಇದಕ್ಕೆ ಪರಿಹಾರ 10 ನಿಮಿಷದ ಧ್ಯಾನ ಅಲ್ಲ. ಶಾಲೆಗಳಲ್ಲಿ ಕೌನ್ಸಿಲರ್ ಗಳ ನೇಮಕಾತಿ ಆಗಬೇಕು. ಶಾಲೆಗಳಲ್ಲಿ ಮಕ್ಕಳ ಸಮಸ್ಯೆ ಬಗ್ಗೆ ಅರಿವು ಬರಬೇಕು. ಶಿಕ್ಷಕರಿಗೂ ಇದರ ಬಗ್ಗೆ ಅರಿವು ಬರಬೇಕುಸಮುದಾಯದಲ್ಲಿ ಗ್ಯಾಜೆಟ್ ರಿಸ್ಟ್ರಿಕ್ಷನ್ ಅಗತ್ಯ ಇದೆ. ಇದನ್ನು ಮಾಡುವುದನ್ನು ಬಿಟ್ಟು 10 ನಿಮಿಷದ ಧ್ಯಾನ ಮಾಡಿ ಇದನ್ನು ಪರಿಹರಿಸುತ್ತೇವೆ ಎನ್ನುವುದು ಸರಕಾರದ ತಪ್ಪು ನಿರ್ಧಾರ ಎಂದರು.
ಇನ್ನು ಮಕ್ಕಳಿಗೆ ಒಳ್ಳೆಯದಾಗುವುದಿದ್ದಲ್ಲಿ ಯಾವುದನ್ನೂ ಮಾಡಲಿ, ಆದರೆ ವಿಜ್ಞಾನದ ನೆಲೆಯಯಲ್ಲಿ ಇದನ್ನು ಮಾಡಲಿ. ತಜ್ಞರ ಅಭಿಪ್ರಾಯ ಪಡೆದು ಯೋಜನೆಯನ್ನು ರೂಪಿಸಿ. ಎಲ್ಲಾ ಶಾಲೆಗಳಲ್ಲಿ ಕೌನ್ಸಿಲರ್ ಇರಬೇಕು ಎಂಬ ನಿಯಮ ಇದೆ. ಇದನ್ನು ಅನುಷ್ಟಾನ ಮಾಡಲಾಗಿದೆಯೇ ಎಂದು ಶಿಕ್ಷಣ ಸಚಿವರು ಹೋಗಿ ನೋಡಲಿ. ಕೌನ್ಸಿಲರ್ಸ್ ಗಳಿಗೆ ತರಬೇತಿಯನ್ನು ಮೊದಲು ನೀಡಲಿ, ತೋರಿಕೆಗಾಗಿ ಮಾಡುವುದು ಬೇಡ ಎಂದು ಹೇಳಿದ್ದಾರೆ.