ಬೆಳ್ತಂಗಡಿ, ನ 04 (DaijiworldNews/HR): ಬಡವರ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ಕಳೆದ 5ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿರುವ ವೀರಾಂಜನೇಯ ಸೇವಾ ಸಮಿತಿ ಮೂರು ಬಡಕುಟುಂಬಕ್ಕೆ ಸಹಾಯಹಸ್ತ ನೀಡಿ ತನ್ನ ಸೇವೆಯನ್ನು ಮುಂದುವರಿಸಿದೆ.
52ನೇ ಸೇವಾಯೋಜನೆಯಾಗಿ ಮೂಡಬಿದ್ರೆ ತಾಲೂಕಿನ ವಾಲ್ಪಡಿಯ ಸುಜಯ ಎಂಬವರು ಸಕ್ಕರೆ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸಾ ವೆಚ್ಚಕ್ಕೆ ಈವರೆಗೆ ಸರಿಸುಮಾರು 2 ಲಕ್ಷದಷ್ಟು ಹಣ ಖರ್ಚು ಮಾಡಿದ್ದಾರೆ. ಈ ಬಡಕುಟುಂಬದ ಕಷ್ಟಕ್ಕೆ ಮರುಗಿದ ಶ್ರೀ ವೀರಾಂಜನೇಯ ಸೇವಾ ಸಮಿತಿ 10,000ರೂ ಸಹಾಯಧನದ ಚೆಕ್ಕನ್ನು ನೀಡಿದ್ದಾರೆ.
ಇನ್ನು 53ನೇ ಸೇವಾಯೋಜನೆಯಾಗಿ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕು.ಶಿಲ್ಪಾ ಎಂಬವರು ಕಳೆದ ಒಂದು ವಾರಗಳ ಹಿಂದೆ ತಲೆಯ ನರದ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಈ ಬಡಕುಟುಂಬಕ್ಕೆ ಶ್ರೀ ವೀರಾಂಜನೇಯ ಸೇವಾ ಸಮಿತಿಯು 10,000ರೂ ಸಹಾಯಧನದ ಚೆಕ್ಕನ್ನು ಶಿಲ್ಪಾ ಇವರ ಬಡಕುಟುಂಬಕ್ಕೆ ಹಸ್ತಾಂತರಿಸಿದರು.
54ನೇ ಸೇವಾಯೋಜನೆಯಾಗಿ, ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಪ್ರವೀಣ್ ಎಂಬವರ ತಾಯಿ ಕಳೆದ 8 ತಿಂಗಳುಗಳಿಂದ ಹಾಗೂ ಇವರ ಪತ್ನಿ 2 ತಿಂಗಳುಗಳಿಂದ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದರು. ಈಗಾಗಲೇ ಹಲವಾರು ಸಾಲಮೂಲಗಳನ್ನು ಮಾಡಿ ಹಾಸ್ಪಿಟಲ್ನ ವೆಚ್ಚ ಭರಿಸಿದ್ದರು. ಈ ಬಡಕುಟುಂಬಕ್ಕೆ ಶ್ರೀ ವೀರಾಂಜನೇಯ ಸೇವಾ ಸಮಿತಿಯು 15,000ರೂ ಸಹಾಯಧನದ ಚೆಕ್ಕನ್ನು ಬಡಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.