ಬೆಳ್ತಂಗಡಿ, ನ 04 (DaijiworldNews/HR): 'ಕಾಂತಾರ' ಸಿನಿಮಾದಲ್ಲಿರುವ ದೈವದ ಪಾತ್ರದಂತೆ ವೇಷ ಹಾಕಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೈದರಾಬಾದ್ ಮೂಲದ ಶ್ವೇತಾ ರೆಡ್ಡಿ ಅವರು ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರಲ್ಲಿ ಕ್ಷಮಾಪಣೆ ಕೇಳಿ ಆಶೀರ್ವಾದ ಪಡೆದಿರುವ ಘಟನೆ ನಡೆದಿದೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶ್ವೇತಾ, ನಾನು ಯಕ್ಷಗಾನ ಪಾತ್ರ ಮತ್ತು ಇದು ಒಂದೇ ಎಂದುಕೊಂಡಿದ್ದೆ. ಇದನ್ನು ತಿಳಿದು ಮಾಡಿರಲಿಲ್ಲ. ಟೀಕೆಗಳು ಬಂದ ಬಳಿಕ ಬೇರೆ ಬೇರೆ ಎಂದು ತಿಳಿಯಿತು. ಸಮಸ್ತ ದೈವಾ ಆರಾಧಕರಲ್ಲಿ ಹಾಗೂ ಜನತೆಯಲ್ಲಿ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಇನ್ನು ಸಿನಿಮಾದ ವರಹಾ ರೂಪಂ ಹಾಡಿಗೆ ರೀಲ್ಸ್ ಮಾಡಲು ದೈವಾರಾಧನೆ ಅಣಕ ಮಾಡಿರುವ ಯುವತಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು. ದೈವಾರಾಧನೆಯು ತುಳುನಾಡಿನ ಧಾರ್ಮಿಕ ನಂಬಿಕೆಯ ಭಾಗವಗಿದೆ. ಹೀಗಾಗಿ ತುಳುನಾಡಿನ ನಂಬಿಕೆಗೆ ಇದರಿಂದ ಧಕ್ಕೆಯಾಗಿದೆ, ರೀಲ್ಸ್ನ್ನು ತಕ್ಷಣ ಡಿಲೀಟ್ ಮಾಡಿ ಕ್ಷಮೆ ಕೇಳುವಂತೆ ಹಲವರು ಕಾಮೆಂಟ್ ಮಾಡಿದ್ದಾರೆ. ಆಕ್ರೋಶದ ಬಳಿಕ ಇನ್ಸ್ಟಾಗ್ರಾಮ್ ಖಾತೆಯಿಂದ ಯುವತಿ ರೀಲ್ಸ್ ಡಿಲೀಟ್ ಮಾಡಿದ್ದಾಳೆ.