ಉಡುಪಿ,ನ 04 (DaijiworldNews/MS): ಕರಾವಳಿ ಮತ್ತು ಮಲೆನಾಡಿನಲ್ಲಿ ಸಂಚಲನ ಮೂಡಿಸಿದ್ದ ಹೆಬ್ರಿ ಸಮೀಪದ ಬೆಳಂಜೆ ತೆಂಕೋಲದಲ್ಲಿ 12 ವರ್ಷಗಳ ಹಿಂದೆ ನಡೆದ ಭಾಗೀರಥಿ (32) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸಲು ವಿಫಲವಾಗಿರುವ ಹಿನ್ನಲೆಯಲ್ಲಿ, ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ಹೊಸನಗರ ತಾಲೂಕು ಹಿಲಕುಂಜಿಯ ಭಾಗೀರಥಿ ಅವರು ಹಾಸನ ಸರಕಾರಿ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಪ್ರೊಪೆಸರ್ ಆಗಿದ್ದ ಡಾ.ಸುರೇಶ್ ಪ್ರಭು ಅವರನ್ನು 1999ರ ಎಪ್ರಿಲ್ನಲ್ಲಿ ವಿವಾಹವಾಗಿದ್ದು, ಅವರು 2010ರ ಜ.6ರಂದು ಹೆಬ್ರಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಪತ್ನಿ ವಿಷದ ಹಾವು ಕಚ್ಚಿ ಸಾವನ್ನಪ್ಪಿದ್ದಾರೆಂದು ಡಾ.ಪ್ರಭು ಹೆಬ್ರಿ ಠಾಣೆಗೆ ದೂರು ನೀಡಿದ್ದರು
ಈ ಸಾವಿನ ಬಗ್ಗೆ ಅನುಮಾನ ಇದ್ದ ಕಾರಣ ಮೃತ ಭಾಗೀರಥಿಯ ಸಹೋದರ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ್ದರು. ಅದರಂತೆ ಮುಖ್ಯಮಂತ್ರಿಗಳು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ತನಿಖೆ ಮಾಡುವಂತೆ ಆದೇಶಿಸಿದ್ದರು. ಎಸ್ಪಿಯವರು ಡಿಸಿಐಬಿ ಇನ್ಸ್ಪೆಕ್ಟರ್ ಗಣೇಶ್ ಹೆಗ್ಡೆ ಅವರನ್ನು ತನಿಖಾಧಿಕಾರಿ ಯಾಗಿ ನೇಮಿಸಿ, ತನಿಖೆ ನಡೆಸುವಂತೆ ಸೂಚಿಸಿದ್ದರು.
ಅದರಂತೆ ತನಿಖೆ ನಡೆಸಿದ ಹೆಗ್ಡೆ ಅವರು ಸುರೇಶ್ ಪ್ರಭು ಹಾಗೂ ಇತರ 6 ಮಂದಿಯ ವಿರುದ್ದ ಪ್ರಕರಣ ದಾಖಲಿಸಿ 57 ಸಾಕ್ಷಿಗಳನ್ನು ಹೊಂದಿರುವ ಚಾರ್ಜ್ಶೀಟ್ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರಲ್ಲಿ ಉಲ್ಲೇಖಿಸಿದಂತೆ ಹಾಸನದ ವೈದ್ಯ ಡಾ ಸುರೇಶ್ ಪ್ರಭು ಹಾಗೂ ಮೃತ ಭಾಗೀರಥಿ ಪತಿ-ಪತ್ನಿಯಾಗಿದ್ದು, ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದೇ ಆಕೆಗೆ ವಿಚ್ಚೇದನ ನೀಡಲು ಬಯಸಿದ್ದ. ಆದರೆ ಭಾಗೀರಥಿ ಇದಕ್ಕೆ ಒಪ್ಪದಿದ್ದರಿಂದ ಅಸಮಾಧಾನಗೊಂಡ ಆರೋಪಿ, ಭಾಗೀರಥಿಯನ್ನು ಸಾಯಿಸಲು ನಿರ್ಧರಿಸಿದ್ದ. ತನ್ನ ಸ್ನೇಹಿತ ಆರನೇ ಆರೋಪಿ ಮಂಜ ಯಾನೆ ಮಂಜುನಾಥ್ ನೆರವಿನಿಂದ ಭಾಗೀರಥಿಗೆ ನಾಗರಹಾವಿನ ವಿಷವನ್ನು ಇಂಜೆಕ್ಷನ್ ಮೂಲಕ ಚುಚ್ಚಿ ಕೊಲೆ ಮಾಡುವ ಯೋಜನೆ ರೂಪಿಸಿ ಇತರರ ನೆರವಿನಿಂದ ಅದನ್ನು ಕಾರ್ಯರೂಪಕ್ಕೆ ತಂದಿದ್ದ. ತನ್ನ ಮಾರುತಿ 800 ಕಾರಿನಲ್ಲಿ ಪತ್ನಿ ಭಾಗೀರಥಿಯನ್ನು ಧರ್ಮಸ್ಥಳಕ್ಕೆ ಕರೆತರುವ ನೆಪದಲ್ಲಿ ತನ್ನ ಸ್ನೇಹಿತರ ನೆರವಿನಿಂದ ಮೊದಲೇ ಯೋಜಿಸಿಕೊಂಡಿದ್ದಂತೆ ಶಿವಮೊಗ್ಗದಿಂದ ತೀರ್ಥಹಳ್ಳಿ-ಆಗುಂಬೆ-ಸೋಮೇಶ್ವರ ಮಾರ್ಗ ವಾಗಿ ಕರೆದುಕೊಂಡು ಬಂದು, ಅಲ್ಲಿಂದ ಮಡಾಮಕ್ಕಿ ರಸ್ತೆಯ ನಿರ್ಜನ ಸ್ಥಳದಲ್ಲಿ ಹಾವಿನ ವಿಷ ತುಂಬಿದ್ದ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿ, ಆಕೆ ಯಾವುದೋ ವಿಷದ ಹಾವು ಕಚ್ಚಿ ಸತ್ತಿದ್ದಾಳೆ ಎಂದು ನಂಬಿಸುವ ಪ್ರಯತ್ನ ನಡೆಸಿದ್ದ. ಅಲ್ಲದೇ ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು. ಆರೋಪಿಗಳ ಪರವಾಗಿ ಉಡುಪಿಯ ನ್ಯಾಯವಾದಿ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.