ಕಾಸರಗೋಡು, ನ 04 (DaijiworldNews/MS): ದೇವಸ್ಥಾನದಿಂದ ಚಿನ್ನಾಭರಣ ಸಹಿತ ಅರ್ಚಕ ಪರಾರಿಯಾದ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ದೇವರ ವಿಗ್ರಹದಿಂದ ಚಿನ್ನಾಭರಣವನ್ನು ಕದ್ದು ನಕಲಿ ಚಿನ್ನಾಭರಣ ತೊಡಿಸಿ ಈತ ಪರಾರಿಯಾಗಿರುವುದಾಗಿ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ಮಂಜೇಶ್ವರ ಹೊಸಬೆಟ್ಟು ಶ್ರೀಮಂಗೇಶ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಅರ್ಚಕನಾದ ತಿರುವನಂತಪುರ ಮೂಲದ ದೀಪಕ್ ನಂಬೂದಿರಿ ವಿರುದ್ಧ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೇವಸ್ಥಾನದಲ್ಲಿ ಅಕ್ಟೋಬರ್ 27 ರಿಂದ ಈತನನ್ನು ಪೂಜೆ ನೆರವೇರಿಸಲು ನೇಮಿಸಲಾಗಿತ್ತು . ಅ. 29 ರಂದು ಸಂಜೆ ಪೂಜೆಯ ಬಳಿಕ ಕಾವಲುಗಾರನಲ್ಲಿ ಹೊಸಂಗಡಿ ಪೇಟೆಗೆಂದು ತೆರಳಿದ್ದ ದೀಪಕ್ ನಂಬೂದಿರಿ ಬಳಿಕ ಮರಳಿ ಬಂದಿಲ್ಲ . ದೇವಸ್ಥಾನದ ಮೊಕ್ತೇಸರ ಕರೆ ಮಾಡಿದರೂ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಇದರಿಂದ ಸಿದ್ದಾಪುರದ ಶ್ರೀಧರ ಭಟ್ ಎಂಬವರನ್ನು ಅರ್ಚಕರನ್ನಾಗಿ ನೇಮಿಸಿದ್ದು , ನವಂಬರ್ ಒಂದರಂದು ಪೂಜೆ ನಡೆಸಲೆಂದು ಗರ್ಭಗುಡಿಗೆ ತೆರಳಿದಾಗ ದೇವರ ವಿಗ್ರಹದಲ್ಲಿದ್ದ ಚಿನ್ನಾಭರಣದ ಮೇಲೆ ಸಂಶಯಗೊಂಡು ಮೊಕ್ತೇಸರರಿಗೆ ಮಾಹಿತಿ ನೀಡಿದ್ದು , ಪರಿಶೀಲಿಸಿದಾಗ ದೇವರ ವಿಗ್ರಹದಲ್ಲಿ ನಕಲಿ ಚಿನ್ನಾಭರಣ ಅಳವಡಿಸಿರುವುದು ಪತ್ತೆಯಾಗಿದೆ. ವಿಗ್ರಹದಲ್ಲಿದ್ದ ಎರಡು ಸರ ಸೇರಿದಂತೆ ಐದೂವರೆ ಪವನ್ ನ ಚಿನ್ನಾಭರಣವನ್ನು ಈತ ಕದ್ದು ಪರಾರಿಯಾಗಿದ್ದಾನೆ ಎಂದು ಮೊಕ್ತೇಸರ ಎಂ . ದೀಪಕ್ ರಾವ್ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.