ಮಂಗಳೂರು, ನ 03 (DaijiworldNews/DB): ಗೋವು ಅಕ್ರಮ ವಧೆ ಪ್ರಕರಣವೊಂದರಲ್ಲಿ ಆರೋಪಿಯ ಜಮೀನನ್ನು ಮುಟ್ಟುಗೋಲು ಹಾಕುವಂತೆ ಸಹಾಯಕ ಆಯುಕ್ತ ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮದನಮೋಹನ್ ಸಿ. ಆದೇಶ ಹೊರಡಿಸಿದ್ದಾರೆ.
ಗೋವನ್ನು ಅಕ್ರಮವಾಗಿ ವಧೆ ಮಾಡಲಾಗಿರುವ ಬಗ್ಗೆ ವಧೆ ಮಾಡಲಾದ ಸ್ಥಳದ ಮಾಲಕ ಯಾಕೂಬ್ ಎಂಬಾತನ ಹೆಸರಿನಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಅಧಿನಿಯಮ 2020ರ ಕಲಂ 8(4) ಹಾಗೂ 8(5)ದಂತೆ ಪ್ರಕರಣ ದಾಖಲಾಗಿತ್ತು. ಕಂಕನಾಡಿ ನಗರ ಠಾಣಾ ಉಪನಿರೀಕ್ಷಕರು ದೂರು ದಾಖಲಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಕೂಬ್ ಹೆಸರಿನಲ್ಲಿ ಅಡ್ಕೂರು ಗ್ರಾಮದ ಅದ್ಯಪಾಡಿಯಲ್ಲಿ ಡೋರ್ ನಂ.1-337 (ಸ.ನಂ.33/6)ರ 15 ಸೆಂಟ್ಸ್ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಮುಟ್ಟುಗೋಲು ಹಾಕುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಇದರೊಂದಿಗೆ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ ವಾಹನ ಹಾಗು ಇತರ ಸೊತ್ತುಗಳನ್ನು ಸಕ್ಷಮ ಪ್ರಾಧಿಕಾರದಿಂದ ಮೌಲ್ಯಮಾಪನ ಮಾಡಿಸಬೇಕು. ಬಳಿಕ ಅದರ ಅಂದಾಜು ಮೌಲ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ದೂರುದಾರರಿಗೆ ನಿರ್ದೇಶನ ನೀಡಲಾಗಿದೆ.
ಈಗಾಗಲೇ 3ನೇ ಸಿಜೆಎಂ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಅದು ಮುಕ್ತಾಯಗೊಂಡ ಬಳಿಕ ಅಂತಿಮ ವರದಿಯನ್ನು ಎಸಿ ಕೋರ್ಟ್ಗೆ ಸಲ್ಲಿಸಬೇಕು. ಅಂತಿಮ ಆದೇಶ ಪ್ರತಿ ಕೂಡಾ ಜೊತೆಗಿರಬೇಕು ಎಂದು ಸೂಚಿಸಲಾಗಿದೆ.
ಅಕ್ರಮ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಅ. 29ರಂದು ಕಂಕನಾಡಿ ಠಾಣೆಯ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳ ವಿಚಾರಣೆ ನಡೆಸಿದಾಗ ಆದ್ಯಪಾಡಿಯಲ್ಲಿ ಯಾಕೂಬ್ನ ಅಕ್ರಮ ಕಸಾಯಿಖಾನೆ ಕಾರ್ಯ ನಿರ್ವಹಿಸುತ್ತಿರುವ ವಿಚಾರ ಗೊತ್ತಾಗಿತ್ತು. ಈ ಮಾಹಿತಿ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ ಅಕ್ರಮ ಕಸಾಯಿಖಾನೆ ಹೊಂದಿದ್ದ ಆರೋಪದಲ್ಲಿ ಕಾಟಿಪಳ್ಳದ ಹಕೀಂ, ಅರ್ಕುಳದ ಬಾತೀಶ್ ಹಾಗೂ ಗಂಜಿಮಠದ ಯೂಸುಫ್ ಎಂಬವರ ಆಸ್ತಿ ಮುಟ್ಟುಗೋಲಿಗೆ ಸಹಾಯಕ ಆಯುಕ್ತರು ಅಕ್ಟೋಬರ 15ರಂದು ಆದೇಶಿಸಿದ್ದರು.
ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಡಿ. ವೇದವ್ಯಾಸ ಕಾಮತ್, ಅಕ್ರಮ ಗೋಹತ್ಯೆ ಮಾಡುವವರ ಆಸ್ತಿ ಮುಟ್ಟುಗೋಲು ಹಾಕುವ ಮೂಲಕ ಗೋ ಹಂತಕರಿಗೆ ಸಂದೇಶ ರವಾನೆಯಾಗಿದೆ. ಕಾನೂನು ಗಾಳಿಗೆ ತೂರುವವರಿಗೆ ಮುಂದೆಯೂ ಶಿಕ್ಷೆ ಕಾದಿದೆ ಎಂದಿದ್ದಾರೆ.