ಉಡುಪಿ, ನ 02 (DaijiworldNews/HR): ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಂಟೈನರ್ ಲಾರಿ ವಾಹನವನ್ನು ಚಲಾಯಿಸಿ, ಪಾದಚಾರಿಯ ಸಾವಿಗೆ ಕಾರಣವಾದ ಆರೋಪಿಗೆ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ. ಎಂ.ಎಫ್.ಸಿ ನ್ಯಾಯಾಲಯವು ಕಾರಾಗೃಹ ವಾಸ ಹಾಗೂ ದಂಡ ವಿಧಿಸಿದೆ.
2021 ಫೆಬ್ರವರಿ 28 ರ ಸಂಜೆ 4.30 ರ ಸಮಯಕ್ಕೆ ಬ್ರಹ್ಮಾವರ ತಾಲೂಕಿನ ಹಲುವಳ್ಳಿ ಗ್ರಾಮದ ಹೆಬ್ರಿ- ಬ್ರಹ್ಮಾವರ ಮುಖ್ಯ ರಸ್ತೆಯ ಧಾರಣ - ಕಂಬಳ ಎಂಬಲ್ಲಿ ಹೆಬ್ರಿಯಿಂದ ಬ್ರಹ್ಮಾವರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ರಸ್ತೆ ಬದಿ ಬರುತ್ತಿದ್ದ ಪಾದಾಚಾರಿ ಕೃಷ್ಣ ಪುತ್ರನ್ ಎಂಬುವವರಿಗೆ ಢಿಕ್ಕಿ ಹೊಡೆದ ಪರಿಣಾಮ ಕೃಷ್ಣ ಪುತ್ರನರವರ ತೊಡೆ, ಎರಡೂ ಕಾಲುಗಳು ಹಾಗೂ ತಲೆಗೆ ತೀವೃ ಸ್ವರೂಪದ ಗಾಯವಾಗಿ ಮೃತಪಟ್ಟಿರುವ ಹಿನ್ನಲೆ ಬ್ರಹ್ಮಾವರ ಠಾಣೆಯ ವೃತ್ತ ನಿರೀಕ್ಷಕರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿರುತ್ತಾರೆ.
ಇನ್ನು ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನಲೆ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ. ಎಂ. ಎಫ್. ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆರೋಪಿ ಅಬೂಬ್ಬಕರ್ಗೆ 2 ವರ್ಷ 6 ತಿಂಗಳು ಕಾರಾಗೃಹ ವಾಸ ಹಾಗೂ 10,000 ರೂ. ದಂಡ ವಿಧಿಸಿದೆ.
ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ. ಕೆ ವಾದ ಮಂಡಿಸಿದ್ದಾರೆ.