ಉಡುಪಿ, ನ 02 (DaijiworldNews/HR): ಬಾರಕೂರು ತುಳು ರಾಜ್ಯದ ರಾಜಧಾನಿ ಆಗಿತ್ತು ಎನ್ನುವುದಕ್ಕೆ 800 ವರ್ಷಕ್ಕಿಂತ ಅಧಿಕ ಇತಿಹಾಸವಿದ್ದು, ಬಹಳಷ್ಟು ದಾಖಲೆಗಳು, ಶಿಲಾಶಾಸನಗಳು ಹಾಗೂ ಬಾರಕೂರಿನಲ್ಲಿ ಅಳಿದುಳಿದ ಒಂದೊಂದು ಕಲ್ಲುಗಳು ಕಥೆ ಹೇಳುತ್ತವೆ ಎಂದು ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ಶಾಂತರಾಮ್ ಶೆಟ್ಟಿ ತಿಳಿಸಿದರು.
ಜೈ ತುಳುನಾಡು ಸಂಘಟನೆಯ ವತಿಯಿಂದ ಬಾರಕೂರಿನ ಮಹತೋಭಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ತುಳುನಾಡ ಐತಿಹಾಸಿಕ ರಾಜಧಾನಿ ಬಾರಕೂರು ಹಾಗೂ ತುಳು ಲಿಪಿ ಸಿಂಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾರಕೂರು ಶ್ರೀಮಂತ ಸಂಸ್ಕೃತಿಯನ್ನು ಇಂದಿಗೂ ತನ್ನಲ್ಲಿ ಹೊಂದಿದ್ದು ಅದನ್ನು ಉಳಿಸುವ ಜವಬ್ದಾರಿ ನಮ್ಮೆಲ್ಲರದ್ದಾಗಿದೆ, ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕಾಗಿದೆ ಈ ನಿಟ್ಟಿನಲ್ಲಿ ತುಳುನಾಡು ಸಂಘಟನೆಯ ಕಾರ್ಯ ಶ್ಲಾಘನೀಯ. ಮೂಲತಃ ನಾನು ಕನ್ನಡ ಭಾಷಿಗನಾಗಿದ್ದರೂ, ಕಂಬಳ ಹಾಗೂ ಕಂಬಳ ಕೋಣಗಳು ನನ್ನನ್ನು ತುಳು ಮಾತನಾಡುವಂತೆ ಪ್ರೇರೆಪಿಸಿದವು ಎನ್ನುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೈ ತುಳುನಾಡು ಸಂಘದ ಉಪಾಧ್ಯಕ್ಷ ವಿಶು ಶ್ರೀಕೇರ ಮಾತನಾಡಿ, ಮುಂದೊಂದು ದಿನ ತುಳುನಾಡಿನ ಮೂಲೆ ಮೂಲೆಯಿಂದ ತುಳುವರ ದಂಡು ಬಾರಕೂರಿಗೆ ಬರುವಂತಾಗಬೇಕು, ತುಳು ಶಿಕ್ಷಣ ಕ್ರಾಂತಿಯಾಗಿ ಮತ್ತೆ ಬಾರಕೂರು ತುಳು ರಾಜ್ಯದ ರಾಜಧಾನಿಯ ವೈಭವವನ್ನು ಮೈದುಂಬಿಕೊಳ್ಳುವಂತೆ ಮಾಡುವ ಜವಬ್ದಾರಿ ನಮ್ಮ ಕೈ ಯಲ್ಲಿ ಇದೆ ಎಂದಿದ್ದಾರೆ.
ಬಾರಕೂರು ಪಂಚಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥ ಮಂಜುನಾಥ ರಾವ್ ಮಾತನಾಡಿ ಹಿಂದೊಮ್ಮೆ ಅತೀ ವೈಭವದಿಂದ ಮೆರೆದ ಬಾರಕೂರಿಗೆ ಇಂದು ಬರುವಾಗ ಹೃದಯ ಭಾರವಾಗುತ್ತದೆ ಇದನ್ನು ಮತ್ತೆ ಗತ ವೈಭವದತ್ತ ಕೊಂಡೊಯ್ಯಲು ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
ಆಳುಪ ರಾಜವಂಶಸ್ಥ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಾ. ಆಕಾಶ್ ಜೈನ್ ತುಳು ಲಿಪಿ ಫಾಂಟ್ ಅಲ್ಲಿಗೆ ಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಕರ್ನಾಟಕದಲ್ಲಿ ಪ್ರಥಮವಾಗಿ ದೊರೆತ ಹಲ್ಮಿಡಿ ಶಿಲಾ ಶಾಸನವು ತಿಳಿ ಭಾಷೆ ಹಾಗೂ ತುಳುನಾಡಿನ ಉಲ್ಲೇಖವನ್ನು ಒಳಗೊಂಡಿದ್ದು, 10 ನೇ ಶತಮಾನದಲ್ಲಿ ಬಂಕದೇವನ ಶಾಸನದಲ್ಲಿಯೂ ತುಳುವಿನ ಬಗ್ಗೆ ಹೇಳಲಾಗಿದೆ. 56 ತುಳು ಲಿಪಿ ಶಿಲಾ ಶಾಸನ, 1500 ಕ್ಕೂ ಅಧಿಕ ತಾಳೆಗ್ರಂಥಗಳು ಹಾಗೂ ಹಲವಾರು ಮಹಾಕಾವ್ಯಗಳು ತುಳುಲಿಪಿಯಲ್ಲಿ ದೊರೆತಿದೆ. ಇಂತಹ ಸಂಪದ್ಬರಿತ ತುಳು ಭಾಷೆ, ಲಿಪಿ ಹಾಗೂ ಸಂಸ್ಕೃತಿಯು ಆಂಗ್ಲರ ಆಡಳಿತದ ಅವಧಿಯಲ್ಲಿ ವಿನಾಶದ ಅಂಚಿನತ್ತ ಸಾಗಿತ್ತು, ಆದರೆ ಇಂದು ತುಳು ಲಿಪಿಯನ್ನು ಅಭಿವೃದ್ಧಿಪಡಿಸಿ ಫಾಂಟ್ ತಯಾರಿಸಿ ಆಧುನಿಕ ಯುಗದಲ್ಲಿ ತುಳುವರಿಗೆ ಸುಲಭವಗಿ ಅವಕಾಶ ಮಾಡಿಕೊಟ್ಟಂತಾಗಿದೆ ಎಂದರು. ಕುಂದಗನ್ನಡ ಹಗೂ ತುಳುವಿಗೆ ವಿಶೇಷವಾದ ಹೊಂದಾಣಿಕೆಯಿದ್ದು ಈ ಎರಡೂ ಭಾಷೆಗಳು ಸಾಂಸ್ಕೃತಿಕವಾಗಿ ಒಂದಕ್ಕೊಂದು ಹತ್ತರದ ಭಾಂದವ್ಯವನ್ನು ಹೊಂದಿದೆ ಎಂದ ಅವರು ರಾಜ್ಯದಲ್ಲಿ 142 ತಮಿಳು, 162 ತೆಲುಗು, 4000 ಉರ್ದು, 1 ಗುಜರಾತಿ ಹಾಗೂ 2 ಮಲಯಾಳಂ ಶಾಲೆಗಳಿದ್ದು, ತುಳುನಾಡಿನಲ್ಲಿ ತುಳುಭಾಷೆಗೆ ಒಂದೇ ಒಂದು ಶಾಲೆಗಳಿಲ್ಲದಿರುವುದು ದುರದೃಷ್ಟಕರ, ಆದರೂ ತುಳುಭಾಷೆಯನ್ನು ಅಧೀಕೃತ ರಾಜ್ಯ ಭಾಷೆಯನ್ನಾಗಿ ಮಾಡುವಲ್ಲಿ ಸರಕಾರ ಒಲವು ತೋರಿಸುತ್ತಿರುವುದು ಸಂತಸತದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಫಾಂಟ್ ಅಭಿವೃದ್ಧಿ ಪಡಿಸಿದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ ಪ್ರಹ್ಲಾದ್ ಜೋಷಿಯನ್ನು ಸನ್ಮಾನಿಸಿ ತುಳು ಲಿಪಿ ಕಲಿಸುತ್ತಿರುವ ಶಿಕ್ಷಕರನ್ನು ಗೌರವಿಸಲಾಯಿತು.
ಜೈ ತುಳುನಾಡು ಸಂಘಟನೆಯ ಕೋಶಾಧಿಕಾರಿ ರಕ್ಷಿತ್ ರಾಜ್ ಸ್ವಾಗತಿಸಿ, ಶರತ್ ಕೊಡವೂರು ವಂದಿಸಿದರು. ಕಾರ್ಯಕ್ರಮದಲ್ಲಿ ಜೈ ತುಳುನಾಡು ಸಂಘದ ಪ್ರಧಾನ ಕಾರ್ಯದರ್ಶಿ ಅವಿನಾಶ್ ಮುಕ್ಕ ಜೈ ತುಳುನಾಡು ಸಂಘಟನೆಯ ಸದಸ್ಯರು, ಊರಿನ ಇತರೆ ಸಂಘ ಸಂಸ್ಥೆಯ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.