ಕುಂದಾಪುರ, ನ 02 (DaijiworldNews/MS): ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಲಾಗಿದೆ ಎನ್ನುವ ಪ್ರಕರಣ ಬೆಳಕಿಗೆ ಬಂದ 24 ಗಂಟೆಗಳ ಒಳಗೆ ಕುಂದಾಪುರ ಪೊಲೀಸರು ಪ್ರಕರಣ ಬೇಧಿಸಿ ಸಂಬಂಧಿಸಿದವರನ್ನು ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ. ಅಪಹರಣಕ್ಕೊಳಗಾಗಿದ್ದ ಎನ್ನಲಾದ ವಿದ್ಯಾರ್ಥಿಯನ್ನು ಕುಂದಾಪುರ ತಾಲೂಕಿನ ಸಿದ್ಧಾಪುರದ ಜನ್ಸಾಲೆ ಎಂಬಲ್ಲಿನ ಗೋವಿಂದ ಶೆಟ್ಟಿ ಎಂಬುವರ ಮಗ ಶಶಾಂಕ ಪ್ರಾಯ (21 ವರ್ಷ) ಎಂದು ಗುರುತಿಸಲಾಗಿದೆ.
ಶಶಾಂಕ್ ಎಂಬಾತ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ. ಅಕ್ಟೋಬರ್ 31ರಂದು ಬೆಳಿಗ್ಗೆ 8.30ಕ್ಕೆ ಕಾಲೇಜಿಗೆ ಹೋಗಿದ್ದ. ಬಳಿಕ 9.30ರ ಸುಮಾರಿಗೆ ಶಶಾಂಕ ತನ್ನ ಮೊಬೈಲ್ ನಿಂದ ತಂದೆ ಗೋವಿಂದ ಶೆಟ್ಟಿಯವರ ಮೊಬೈಲ್ ಗೆ ಕರೆ ಮಾಡಿ ತನ್ನನ್ನು ಕೋಟೇಶ್ವರದ ಕೋಸ್ಟೆಲ್ ಕ್ರೌನ್ ಮಾಲ್ ಬಳಿಯಿಂದ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದು, 30 ಲಕ್ಷ ಹಣ ನೀಡುವಂತೆ ಒತ್ತಾಯಿಸಿ ಭಯ ಪಡಿಸಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಅಪಹರಿಸಿದ್ದಾನೆ ಎನ್ನಲಾದ ಆರೋಪಿಯು ನಾಪತ್ತೆಯಾದ ಶಶಾಂಕ್ ನ ತಂದೆಯೊಂದಿಗೆ ಮಾತನಾಡಿ ರೂ. 30 ಲಕ್ಷ ಹಣವನ್ನು ನೀಡಿ ಮಗನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದ.
ಘಟನೆ ನಡೆದು ಎರಡು ದಿನಗಳಾದರೂ ಮಗ ಮನೆಗೆ ಬರದೇ ಇರುವುದರಿಂದ ಗಾಬರಿಗೊಂಡ ಶಶಾಂಕ್ ತಾಯಿ ಕುಂದಾಪುರ ಠಾಣೆಯಲ್ಲಿ ಮಂಗಳವಾರ ಸಂಜೆ ದೂರು ದಾಖಲಿಸಿದ್ದರು. ಪ್ತಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಂದಾಪುರ ಪೊಲೀಸರು ಪ್ರಕರಣ ದಾಖಲಾಗಿ 24 ಗಂಟೆಗಳೊಳಗೆ ನಾಪತ್ತೆಯಾದ ಶಶಾಂಕ್ ಹಾಗೂ ಆರೋಪಿ ಹುಬ್ಬಳ್ಳಿ ಮೂಲದ ಕಿರಣ ಎಂಬಾತನನ್ನು ಕುಷ್ಟಗಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಕಿರಣ್ ಹಾಗೂ ಶಶಾಂಕ್ ನಡುವೆ ಹಣಕಾಸಿನ ವ್ಯವಹಾರವಿತ್ತು ಎನ್ನಲಾಗಿದ್ದು, ತನಿಖೆಯಿಂದಷ್ಟೆ ಸತ್ಯಾಂಶ ಹೊರಬೀಳಬೇಕಾಗಿದೆ.