ಸುಳ್ಯ, ನ 01 (DaijiworldNews/SM): ತಾಲೂಕಿನ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಲ್ವರನ್ನು ಬಂಧಿಸುವುದು ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ.
ಪ್ರವೀಣ್ ಹತ್ಯೆ ನಡೆದು ಎರಡು ತಿಂಗಳುಗಳೆ ಕಳೆದಿದ್ದರೂ ಇನ್ನೂ ಕೆಲ ಆರೋಪಿಗಳನ್ನು ಪತ್ತೆಹಚ್ಚಲು ಅಸಾಧ್ಯವಾಗಿದೆ. ಪ್ರವೀಣ್ ನೆಟ್ಟಾರ್ ಅವರನ್ನು ಕೊಲೆಗೈದ ಬಳಿಕ ರಾಜ್ಯದಲ್ಲಿ ತೀವ್ರ ಸಂಚಲನವುಂಟಾಗಿತ್ತು. ಬಳಿಕ ತನಿಖೆಯ ಜವಾಬ್ದಾರಿಯನ್ನು ಸರಕಾರ ಎನ್ ಐ ಎಗೆ ವಹಿಸಿತ್ತು. ಎನ್ ಐ ಎ ತನಿಖೆ ವಹಿಸಿಕೊಳ್ಳಲು ತಡ ಆದ ಕಾರಣದಿಂದ ಕೆಲ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಆದರೆ, ಇಲ್ಲಿಯ ತನಕ ಅವರ ಸುಳಿವು ಲಭ್ಯವಾಗಿಲ್ಲ.
ಇದೀಗ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ವರು ಆರೋಪಿಗಳ ಪತ್ತೆಗೆ ಎನ್ಐಎ ಬಹುಮಾನ ಘೋಷಿಸಿದೆ. ತಲೆಮರೆಸಿಕೊಂಡ ಆರೋಪಿಗಳಾದ ಮಹಮ್ಮದ್ ಮುಸ್ತಾಫ ಬೆಳ್ಳಾರೆ, ತುಫೈಲ್ ಮಡಿಕೇರಿ ಅವರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 5 ಲಕ್ಷ ನೀಡುವುದಾಗಿ ಘೋಷಿಸಲಾಗಿದೆ.
ಉಳಿದಂತೆ ಉಮ್ಮರ್ ಫಾರೂಕ್ ಸುಳ್ಯ, ಅಬೂಬಕ್ಕರ್ ಸಿದ್ದೀಕ್ ಬೆಳ್ಳಾರೆ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 2 ಲಕ್ಷ ಬಹುಮಾನ ನೀಡುವುದಾಗಿ ಎನ್.ಐ.ಎ.ಘೋಷಿಸಿದೆ.