ಪಡುಬಿದ್ರಿ, ನ 01 (DaijiworldNews/SM): ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕಿಯೆಂದೇ ಕರೆಯಲ್ಪಡುತ್ತಿದ್ದ ತೋಕೂರು ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಹೆಜಮಾಡಿಯ ತನ್ನ ಗಂಡನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮುಂಜಾವ ನಡೆದಿದೆ. ಹೆಜಮಾಡಿ ಟೋಲ್ ಬಳಿಯ ಚಿತ್ರಕೂಟ ಮನೆಯ ಸದಾಶಿವ ಗಡಿಯಾರ್ರವರ ಪತ್ನಿ, ತೋಕೂರು ತಪೋವನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಜಯಂತಿ ಸದಾಶಿವ ಗಡಿಯಾರ್(೫೪) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ತನ್ನ ಸಹೋದರಿ ಮಾನಸಿಕ ಖಿನ್ನತೆಗೊಳಗಾಗಿದ್ದ ಸಂದರ್ಭ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದ ಜಯಂತಿಯವರು ಅವರು ಗುಣಮುಖರಾದ ಬಳಿಕ ತೀರಾ ಇತ್ತೀಚೆಗಷ್ಟೇ ಸ್ವಯಂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು 25 ದಿನಗಳ ಹಿಂದೆ ತನ್ನ ಮಗಳ ಮನೆ ಬೆಂಗಳೂರಿಗೆ ತೆರಳಿ ವಿಶ್ರಾಂತಿ ಪಡೆದಿದ್ದರು. ಸೋಮವಾರವಷ್ಟೇ ಗಂಡನ ಜತೆಗೆ ಹೆಜಮಾಡಿಗೆ ಆಗಮಿಸಿದ್ದ ಅವರು ರಾತ್ರಿವರೆಗೂ ಖುಷಿಯಿಂದ ಇದ್ದರು.
ಮುಂಜಾವ 3.30 ಗಂಟೆಗೆ ಸದಾಶಿವ ಗಡಿಯಾರ್ ಎದ್ದು ನೋಡಿದ ಸಂದರ್ಭ ಅವರು ಕಾಣದಾದಾಗ ಬಾಗಿಲು ತೆರೆದು ಹೊರ ಬಂದ ಸಂದರ್ಭ ಮನೆ ಬಾವಿಗೆ ಹಾಸಲಾಗಿದ್ದ ಕಬ್ಬಿಣದ ಮುಚ್ಚಳ ತೆರೆದ ಸ್ಥಿತಯಲ್ಲಿತ್ತು. ಈ ಸಂದರ್ಭ ಮನೆಯಲ್ಲಿದ್ದ ಮಗ ರಾಧಾಕೃಷ್ಣ ಗಡಿಯಾರ್ನನ್ನು ಕರೆದು ಪರಿಶೀಲಿಸಿದಾಗ ಬಾವಿಯಲ್ಲಿ ಅವರು ಪ್ರಜ್ಞಾಹೀನ ಸ್ಥಿತಯಲ್ಲಿರುವುದು ಕಂಡು ಬಂದಿತ್ತು. ತಕ್ಷಣ ರಾಧಾಕೃಷ್ಣ ಬಾವಿಗೆ ಹಾರಿ ತಾಯಿಯನ್ನು ಹಿಡಿದು ಪರಿಶೀಲಿಸಿದಾಗ ಮೃತಪಟ್ಟಿರುವುದು ಕಂಡುಬಂದಿತ್ತು. ಇದೇ ಸಂದರ್ಭ ಪಕ್ಕದ ಟೋಲ್ ಸಿಬ್ಬಂದಿಗಳು ಆಗಮಿಸಿ ಇಬ್ಬರನ್ನೂ ಮೇಲಕ್ಕೆತ್ತಿದ್ದರು. ತಕ್ಷಣ ಜಯಂತಿಯವರನ್ನು ಆಸ್ಪತ್ರೆಗೆ ಕೊಂಡೊಯ್ದ ವೇಳೆ ಅದಾಗಲೇ ಅವರು ಮೃತಪಟ್ಟಿರುವುದು ದೃಢ ಪಟ್ಟಿತ್ತು.
ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೋಕೂರು ತಪೋವನ ಶಾಲೆಯಲ್ಲಿ ಕಳೆದ 26 ವರ್ಷಗಳಿಂದ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜಯಂತಿಯವರು ಅತ್ಯುತ್ತಮ ಶಿಕ್ಷಕಿಯೆಂದೇ ಎಲ್ಲರಿಂದ ಪರಿಗಣಿಸ್ಪಟ್ಟಿದ್ದರು.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821