ಮಂಗಳೂರು, ನ 01 (DaijiworldNews/SM): ಕಿತ್ತಳೆ ವ್ಯಾಪಾರವನ್ನು ಮಾರಿ ತನ್ನೂರಿನಲ್ಲಿ ಶಿಕ್ಷಣ ಕ್ರಾಂತಿಯನ್ನು ಮೆರೆದು ಅಕ್ಷರ ಸಂತ ಎಣಿಸಿಕೊಂಡು ಪದ್ಮಶ್ರೀ ಪುರಸ್ಕಾರಕ್ಕೆ ಭಾಜಿನರಾಗಿರುವ ಹರೇಕಳದ ಹಾಜಬ್ಬ ಅವರಿಗೆ ಸರಕಾರ ಇದೀಗ ರಾಜ್ಯೋತ್ಸವ ಸಂದರ್ಭದಲ್ಲಿ ಮತ್ತೊಂದು ಗಿಫ್ಟ್ ನೀಡಿದೆ. ಹಾಜಬ್ಬ ಅವರಿಗೆ ಪಿ.ಯು. ಕಾಲೇಜನ್ನು ಮಂಜೂರು ಮಾಡಿ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ.
ಹಲವು ವರ್ಷಗಳಿಂದ ಹಾಜಬ್ಬ ಪಿಯು ಕಾಲೇಜಿಗಾಗಿ ಮನವಿ ಸಲ್ಲಿಸುತ್ತಿದ್ದರು, ಆಗ್ರಹಗಳನ್ನು ಮಾಡುತ್ತಿದ್ದರು. ಜನಪ್ರತಿನಿಧಿಗಳಿಗೆ ಮನವಿ ಕೊಟ್ಟಿದ್ದರು. ಇದೀಗ ಅವರ ಅರ್ಜಿ ಪುರಸ್ಕೃತಗೊಂಡಿದೆ. ‘ಕರ್ನಾಟಕ ರಾಜ್ಯೋತ್ಸವ’ದ ಉಡುಗೊರೆ ಎಂಬಂತೆ ಪಿಯು ಕಾಲೇಜು ಮಂಜೂರುಗೊಳಿಸಲಾಗಿದೆ.
ಸುಮಾರು 30 ವರ್ಷದ ಹಿಂದೆ ಮಂಗಳೂರು ನಗರದ ಬೀದಿಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡಿ ಹಾಜಬ್ಬ ಅವರು ತನ್ನೂರು ನ್ಯೂಪಡ್ಪುವಿನಲ್ಲಿ ಸರಕಾರಿ ಶಾಲೆ ಮಂಜೂರುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಅಂದರೆ 1999-2000ನೇ ಸಾಲಿಗೆ ನ್ಯೂಪಡ್ಪುಗೆ ಪ್ರಾಥಮಿಕ ಶಾಲೆ ಮಂಜೂರಾಗಿತ್ತು. ಬಳಿಕ ಹಾಜಬ್ಬರು ಶಾಲೆಯನ್ನು ಅಭಿವೃದ್ಧಿಪಡಿಸುತ್ತಲೇ ಮುನ್ನೆಡೆದರು. ಹಾಗೇ ಪ್ರೌಢಶಾಲೆ ಮಂಜೂರಾಯಿತು. ಜೊತೆಗೆ ಅನೇಕ ಪ್ರಶಸ್ತಿ, ಸನ್ಮಾನಕ್ಕೆ ಭಾಜನರಾದರು.
ಶಾಲೆ ಮಂಜೂರಾದ ಬಳಿಕ ಪಿ.ಯು. ಕಾಲೇಜಿನ ಕನಸು ಕಂಡಿದ್ದರು. ಇದೀಗ ಅವರ ಕನಸು ನನಸಾಗುವ ಕ್ಷಣ ಹತ್ತಿರವಾಗಿದೆ. ಸರಕಾರ ಹಾಜಬ್ಬ ಅವರಿಗೆ ಪಿಯು ಕಾಲೇಜು ಮಂಜೂರು ಮಾಡಿದೆ.