ಉಡುಪಿ, ನ 01 (DaijiworldNews/HR): ಉಡುಪಿಯ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಧ್ವಜಾರೋಹಣ ನಡೆಸಿ, ಎಸ್.ಅಂಗಾರ ಗೌರವ ವಂದನೆಯನ್ನು ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಚಿವ ಎಸ್.ಅಂಗಾರರವರು "ಕರ್ನಾಟಕ ರಾಜ್ಯ ಏಕೀಕರಣದ ಕುರಿತು ಕುವೆಂಪು,ಬೇಂದ್ರೆ, ಕಾರಂತ,ಮಾಸ್ತಿ ಮುಂತಾದ ಸಹಸ್ರಾರು ಕನ್ನಡಿಗರ ಒತ್ತಸೆಯಿಮದ ನಮ್ಮ ನಾಡು ಭಾರತ ಜನನಿಯ ತನುಜಾತೆ ಉದಯವಾದದ್ದು ಒಂದು ರೋಚಕ ಇತಿಹಾಸ. ಭಾರತದಲ್ಲಿ ಶಾಸ್ತ್ರೀಯ ಭಾಷೆಯ ಗೌರವವನ್ನು ಪಡೆದ ಆರು ಭಾಷೆಗಳಲ್ಲಿ ಕನ್ನಡ ಮೂರನೆಯದ್ದು ಎಂದು ಅಭಿಮಾನದಿಂದ ಹೇಳಬೇಕಿದೆ. ಬೌದ್ದ, ಜೈನ, ಶೈವ,ವೈಷ್ಣವ ಮತಗಳಲ್ಲದೆ ಇನ್ನು ಹಲವಾರು ಪಂಥಗಲು,ಜಾತಿಗಳು ಕರ್ನಾಟಕದಲ್ಲಿ ಶಾಂತಿ ಸೌಹಾರ್ದಗಳಿಂದ ಬಾಳಿ ಸಮನ್ವಯವನ್ನು ಸಾಧಿಸಿದೆ.ಕನ್ನಡ ಜನ ತಮ್ಮ ಪರಂಪರೆಯ ನಿಜವಾದ ಅರಿವನ್ನು ಪಡೆದಗ ಅವರ ಕೀಳರಿಮೆ ತೊಲಗಿ ಅವರು ಸ್ವಾಭಿಮಾನಿಗಳಾಗುತ್ತಾರೆ. ಇಂದು ಅಗತ್ಯವಾಗಿರುವುದು ಒಗ್ಗಟ್ಟು. ಒಕ್ಕಲಿಗ, ಲಿಂಗಾಯತ,ಬೇಡ,ಕುರುಬ,ಬ್ರಾಹ್ಮಣ, ದಲಿತ,ಮುಸಲ್ಮಾನ,ಕ್ರಿಶ್ಚಿಯನ್ ಎಂಬ ಭೇದವಿಲ್ಲದೇ ಎಲ್ಲ ಕನ್ನಡದ ಜನ ಕನ್ನಡದ ಉಳಿವು,ಬೆಳವಣಿಗೆಗಾಗಿ ಒಂದಾಗುವುದು ಅಗತ್ಯ. ನಮ್ಮ ನಾಡು, ನುಡಿಯ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರವು ಕಾಲಕಾಲಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆಯೇ ಈ ವರ್ಷ ಕನ್ನಡ ಸಂಸ್ಕೃತಿ ಇಲಾಖೆಯ ಕರೆಯಂತೆ ಕೋಟಿ ಕಂಠ ಗಾಯನ ಕರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಗೊಂಡಿದೆ. ಕಳೆದ ಬಾರಿಯ ಮಾತಾಡ್ ಮಾತಾಡ್ ಕನ್ನಡ ಅಭಿಯಾನದಂತೆ ಈ ವರ್ಷದ ಕನ್ನಡ ಗಾಯನ ಕಾರ್ಯಕ್ರಮ ತುಂಬು ಯಶಸ್ಸನ್ನು ಕಂಡಿದೆ" ಎಂದರು.
ಜಿಲ್ಲೆಯ 34 ಜನರಿಗೆ ಹಾಗೂ 2 ಸಂಸ್ಥೆಗಳಿಗೆ 2022 ನೇ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿ ಪ್ರಶಸ್ತಿಯನ್ನು ವಿತರಿಸಲಾಯಿತು. ಉಡುಪಿಶಾಸಕ ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್, ನಗರಸಭೆ ಅದ್ಯಕ್ಷೆ ಸುಮಿತ್ರಾ ಆರ್ ನಾಯಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪ್ರಶಾಂತ್ ಶೆಟ್ಟಿ ಹಾವಂಜೆ ಹಾಗೂ ಡಾಕ್ಟರ್ ರೋಶನ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.