ಮಂಗಳೂರು, ನ 01(DaijiworldNews/MS): ಇಲ್ಲಿನ ನೆಹರೂ ಮೈದಾನದಲ್ಲಿ ನ01ರ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನೀಲ್ ಕುಮಾರ್ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಸಚಿವರು,ಕನ್ನಡವನ್ನು ಬೆಳೆಸಬೇಕಾದರೆ ಅದನ್ನು ಬಳಸಬೇಕಾಗಿರುತ್ತದೆ. ಆಡಳಿತದಲ್ಲಿ ಕನ್ನಡ ಜಾರಿಗೊಳಿಸಲು ಈಗಾಗಲೇ ನಮ್ಮ ಸರಕಾರ ಪ್ರತಿಬದ್ದವಾಗಿದ್ದು, ಕನ್ನಡ ಭಾಷೆಯನ್ನು ವ್ಯಾಪಕವಾಗಿ ಬಳಸಲು ಕ್ರಮವಹಿಸಲಾಗುತ್ತಿದೆ.ಸುತ್ತೋಲೆಗಳು, ಆದೇಶಗಳು, ನೋಟಿಸ್ಗಳು, ಅಧಿಕೃತ ಜ್ಞಾಪನ, ಅಧಿಸೂಚನೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಹೊರಡಿಸಲಾಗುತ್ತಿದೆ. ಡಾ. ಸರೋಜಿನಿ ಮಹಿಷಿ ವರದಿ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಸಮೀಕ್ಷಾ ವರದಿಯನ್ನು ವಿವಿಧ ಇಲಾಖೆಗಳು ಸರ್ಕಾರಕ್ಕೆ ಸಲ್ಲಿಸುತ್ತಿವೆ ಎಂದು ಹೇಳಿದರು.
ಕನ್ನಡದ ಸತ್ವ, ಸೊಗಸು, ಹಿರಿಮೆಗಳನ್ನು ಎತ್ತರಕ್ಕೇರಿಸಿದ ಬಿ.ಎಂ. ಶ್ರೀ, ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ರನ್ನಾಧಿಯಾಗಿ ಈಗಿನ ಎಲ್ಲಾ ಆಧುನಿಕ ಕವಿಗಳ ಕನ್ನಡ ನಾಡು, ನುಡಿ, ಸಂಸ್ಕೃತಿಯ ಮೇಲಿನ ಉತ್ಕತ ಅಭಿಮಾನ ನಮ್ಮ ಆದರ್ಶವಾಗಬೇಕು. ನಮ್ಮ ಭಾಷೆಯನ್ನು ಉಳಿಸಿ ಬೆಳೆಸುತ್ತಲೇ ಇತರ ಭಾಷೆಯನ್ನು ಉಳಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ. ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಯು.ಟಿ. ಖಾದರ್, ಉಮನಾಥ್ ಕೋಟ್ಯಾನ್, ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮ ಹಾಗೂ ಇತರೆ ಗಣ್ಯರು ಭಾಗವಹಿಸಿದ್ದರು.