ವಿಟ್ಲ, ಫೆ 19(SM): ಪ್ಯಾನ್ ನಿಂದ ಬೆಂಕಿ ಉಂಡೆ ಮಂಚಕ್ಕೆ ಬಿದ್ದು ಮನೆಯೊಳಗೆ ಬೆಂಕಿ ಆವರಿಸಿಕೊಂಡು ಸಾಮಗ್ರಿಗಳು ಸುಟ್ಟು ಭಸ್ಮವಾದ ಘಟನೆ ವಿಟ್ಲಪಡ್ನೂರು ಗ್ರಾಮದ ಕುಕ್ಕಿಲ ಎಂಬಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ ವಿದ್ಯುತ್ ಶಾಕ್ ಗೆ ಇಬ್ಬರು ಗಂಭೀರ ಗಾಯಗೊಂಡು ಓರ್ವ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಂಜಿಗದ್ದೆ ರಮೇಶ್ಚಂದ್ರ, ಅವರ ಪತ್ನಿ ಗೀತಾ ಗಂಭೀರ ಗಾಯಗೊಂಡಿದ್ದು, ಪುತ್ರ ಅಭಿಷೇಕ್ ಗಾಯಗೊಂಡಿದ್ದಾರೆ. ಬೆಳಗ್ಗೆ ೫ ಗಂಟೆಗೆ ಮಲಗಿದ್ದ ಸಮಯ ಕೋಣೆಯಲ್ಲಿ ಫ್ಯಾನ್ನಿಂದ ಏಕಾಏಕಿ ಬೆಂಕಿ ಉಂಡೆ ಹಾಸಿಗೆಗೆ ಬಿದ್ದಿದೆ. ಇದರಿಂದ ಎಚ್ಚರಗೊಂಡ ಅವರು ತತ್ಕ್ಷಣ ಮನೆಯ ಹೊರಗೆ ಓಡಿಬಂದಿದ್ದಾರೆ. ಹಾಸಿಗೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಮನೆಯ ಮೂರು ಕೋಣೆಗಳ ವೈಯರಿಂಗ್ ಸುಟ್ಟು ಕರಕಲಾಗಿದೆ.
ಪ್ಯಾನ್ ನಿಂದ ಬೆಂಕಿ ಬಿದ್ದ ಕಾರಣ ವಿದ್ಯುತ್ ಸ್ಥಗಿತ ಮಾಡುವ ನಿಟ್ಟಿನಲ್ಲಿ ಮೈನ್ ಸ್ವಿಚ್ ಸಮೀಪ ಹೋದ ಗೀತಾ ಅವರಿಗೆ ವಿದ್ಯುತ್ ಶಾಕ್ ಹೊಡೆದಿದ್ದೂ ಅಲ್ಲದೆ, ಬೆಂಕಿಯ ತೀವ್ರತೆಗೆ ಅಲ್ಲೇ ಪಕ್ಕದಲ್ಲಿದ್ದ ಕಿಟಕಿ ಗಾಜು ಒಡೆದು ಕೈಗೆ ಹಾಗೂ ಕಾಲಿಗೆ ಗಂಭೀರ ಗಾಯಗೊಂಡಿದ್ದಾರೆ. ಈ ಸಂದರ್ಭ ಅವರನ್ನು ರಕ್ಷಿಸಲು ಹೋದ ರಮೇಶ್ಚಂದ್ರ ಅವರಿಗೂ ತೀವ್ರ ತರದ ಗಾಯಗಳಾಗಿದೆ. ಗಂಭೀರವಾಗಿ ಗಾಯಗೊಂಡ ರಮೇಶ್ಚಂದ್ರ ಮತ್ತು ಗೀತಾ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೈವೋಲ್ಟೇಜ್: ಹಲವು ಮನೆಗಳ ಸಾಮಗ್ರಿ ಭಸ್ಮ:
ವಿಟ್ಲಮುಡ್ನೂರು ಗ್ರಾಮದ ಅಬೀರಿಯ ವಿದ್ಯುತ್ಪರಿವರ್ತಕದಲ್ಲಿ ಮಂಗಳವಾರ ಬೆಳಗ್ಗೆ ೮.೩೦ರ ಸಮಯ ಏಕಾಏಕಿ ಹೈವೋಲ್ಟೇಜ್ ಪ್ರವಹಿಸಿ, ಹಲವು ಮನೆಗಳ ವಿದ್ಯುತ್ ಸಾಮಗ್ರಿಗಳು ಭಸ್ಮಗೊಂಡಿವೆ. ನೂಜಿ ರಾಮಚಂದ್ರ ಭಟ್, ಸುಬ್ರಹ್ಮಣ್ಯ ಭಟ್, ಚಂದಪ್ಪ, ಹರಿಶ್ಚಂದ್ರ ಮತ್ತಿತರರ ಮನೆಗಳಲ್ಲಿ ಪಂಪು, ಮಿಕ್ಸಿ, ಗ್ರೈಂಡರ್, ಟಿವಿ, ಫ್ರಿಡ್ಜ್ ಇತ್ಯಾದಿ ಸಾಮಗ್ರಿಗಳು ಸುಟ್ಟುಹೋಗಿವೆ. ವಿದ್ಯುತ್ ವಯರಿಂಗ್ ಕೂಡಾ ಸುಟ್ಟುಹೋಗಿದೆ.