ಮಂಗಳೂರು, ಅ 31 (DaijiworldNews/SM): ಕನ್ನಡ ರಾಜ್ಯೋತ್ಯವದಲ್ಲಿ ಕರ್ನಾಟಕ ರತ್ನ, ಜನರ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅಗಲಿರುವ ನೋವಿನ ನಡುವೆಯೂ ಸಂತಸದ ಸಂಗತಿಯೆಂದರೆ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಟಿಸಿರುವ ಗಂಧದ ಗುಡಿ ಸಿನಿಮಾ ಜನ ಮಾನಸವನ್ನು ಸೆಳೆಯುತ್ತಿದೆ.
ಇಂತಹ ಸುಂದರ ಘಳಿಗೆಯಲ್ಲಿ ಮೇಕಪ್ ಆರ್ಟ್ ಮೂಲಕ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಬ್ಯೂಟಿಷಿಯನ್, ಅಪ್ಪು ಅವರ ಅಭಿಮಾನಿ, ಬೆಂದೂರ್ ವೆಲ್ನಲ್ಲಿರುವ ಹೆಸರಾಂತ ಚೇತನಾ ಬ್ಯೂಟಿ ಲೌಂಜ್ನ ಚೇತನಾ ಅವರ ಕೈ ಚಳಕದಲ್ಲಿ ಅಪ್ಪು ಅಭಿನಯದ "ಗಂಧದ ಗುಡಿ" ಫೇಸ್ ಪೈಂಟಿಂಗ್ ಅದ್ಭುತವಾಗಿ ಮೂಡಿ ಬಂದು ಕಣ್ಮಣ ಸೆಳೆಯುತ್ತಿದೆ.
ಈ ಸುಂದರ ಆರ್ಟ್ ಮೂಲಕ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿಕೊಂಡು ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಷಯ ಕೋರಿದ್ದಾರೆ.
ಅದ್ಭುತವಾದ ಕಲಾಕುಂಚದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿರುವ ಚೇತನಾ ಅವರು, ಪುನೀತ್ ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿಯೂ ಹೌದು. ಅಪ್ಪು ಅಭಿನಯದ ಕೊನೆಯ ಚಿತ್ರ "ಗಂಧದ ಗುಡಿ" ಸಿನಿಮಾದಿಂದ ಪ್ರೇರಣೆಗೊಂಡು, ಆ ಸಿನಿಮಾದ ಪ್ರಾಕೃತಿಕ ಸಿನಿಮಾವನ್ನು ತಮ್ಮ ಕಲೆಯ ಮೂಲಕ ಬಿಂಬಿಸಿದ್ದಾರೆ ಚೇತನಾ. ಗಂಧದ ಗುಡಿಯ ಸಂಪೂರ್ಣ ದೃಶ್ಯವನ್ನು ಕೇವಲ ಒಂದು ಮೊಗದ ಮೇಲೆ ಸುಂದರವಾಗಿ ಚಿತ್ರಿಸಿ ಕಲಾ ಲೋಕ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ.
ಗಂಧದ ಗುಡಿ ಚಿತ್ರದಲ್ಲಿ ಕಂಡು ಬರುವ ಹಸಿರಿನ ಬನಸಿರಿಯನ್ನು ವಿದ್ಯಾರ್ಥಿಯೊಬ್ಬನ ಮುಖದ ಮೇಲೆ ಚಿತ್ರಿಸುವ ಮೂಲಕ ಯುವ ರತ್ನ ಪುನೀತ್ ಅವರ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ. ಅದರ ಜೊತೆಯಲ್ಲಿ, "ಕಾಡನ್ನು ರಕ್ಷಿಸಿ-ಪ್ರಾಣಿಗಳನ್ನು ಉಳಿಸಿ" ಎಂಬ ಧ್ಯೇಯ ವಾಕ್ಯದೊಂದಿಗೆ ತಮ್ಮ ಕಲೆಯನ್ನು ಅನಾವರಣಗೊಳಿಸಿದ್ದು, ಅವರ ಪರಿಸರ ಪ್ರೇಮವನ್ನು ಕೂಡಾ ಪ್ರತಿಬಿಂಬಿಸುತ್ತಿದೆ. ವಿದ್ಯಾರ್ಥಿಯೊಬ್ಬನ ಮುಖದ ಮೇಲೆ ಗಂಧದ ಗುಡಿಯ ಸುಂದರ ದೃಶ್ಯವನ್ನು ಬಿಡಿಸುವ ಮೂಲಕ ತಮ್ಮ ಕಲಾ ಪಾರಮ್ಯವನ್ನು ಮೆರೆದಿರುವ ಚೇತನಾ ಅವರು ಕೆಲ ದಿನಗಳ ಹಿಂದೆಯಷ್ಟೇ, ಯುವತಿಯೊಬ್ಬಳ ಮೊಗದ ಮೇಲೆ ಮೂರನೇ ಕಣ್ಣನ್ನು ಚಿತ್ರಿಸುವ ಮೂಲಕ ಜನಮನ ಸೆಳೆದಿದ್ದರು. ಅವರ ಈ ಮೂರನೇ ಕಣ್ಣಿನ ಫೇಸ್ ಪೇಂಟಿಂಗ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತಲ್ಲದೆ, ಕಲಾ ಪ್ರೇಮಿಗಳ ಹೃದಯ ಗೆದ್ದಿತ್ತು.
ಯಕ್ಷಗಾನ ರಂಗದಲ್ಲಿ ಸದಾ ಬಣ್ಣಹಚ್ಚಿ ಕುಣಿಯುವ ಯಕ್ಷಗಾನ ಕಲಾವಿದ, ಮಾಡೆಲ್, ಬಿಬಿಎ ವಿದ್ಯಾರ್ಥಿ ಭುವನ್ ಶೆಟ್ಟಿ ಅವರು ಈ ಗಂಧದ ಗುಡಿಯ ಚಿತ್ರಕಲೆಗೆ ಸಹಕರಿಸಿದ್ದಾರೆ. ಅಲ್ಲದೆ, ಚೇತನಾ ಅವರ ಈ ವಿಭಿನ್ನ ಕಲಾಕುಂಚವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದು, ಖ್ಯಾತ ಛಾಯಚಿತ್ರಗಾರ ಪುನಿಕ್ ಶೆಟ್ಟಿ. ಚೇತನಾ ಬ್ಯೂಟಿ ಲೌಂಜ್ನ ಚೇತನಾ ಅವರು ರಿಯಲಿಸ್ಟಿಕ್ ಮೇಕಪ್, ಫೇಸ್ ಪೇಂಟಿಂಗ್ ಹಾಗೂ ಇನ್ನಿತರ ವಿಭಿನ್ನ ವಿನೂತನ ಪ್ರಯೋಗಗಳ ಮೂಲಕವೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅದರ ಜೊತೆಯಲ್ಲಿ ಸಮಾಜ ಸೇವೆಯ ಭಾಗವಾಗಿ ಬ್ಯೂಟಿಶಿಯನ್ ಕಲಿಯಬಯಸುವ ಆರ್ಥಿಕವಾಗಿ ಹಿಂದುಳಿದ ಯುವತಿಯರಿಗೆ ಉಚಿತವಾಗಿ ತರಬೇತಿಯ ಮೂಲಕ ಉದ್ಯೋಗಕ್ಕೆ ಸಹಕರಿಸುವ ಮೂಲಕ ಚೇತನಾ ಅವರು ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.