ಮಂಗಳೂರು, ಅ 31 (DaijiworldNews/DB): ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷೆ, ದೈವಾರಾಧನೆಯ ಕುರಿತು ಆಕ್ಷೇಪಾರ್ಹ ರೀತಿಯಲ್ಲಿ ಪೋಸ್ಟ್ ಮಾಡುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ತುಳುನಾಡು ದೈವಾರಾಧನೆ ಸಂರಕ್ಷಣಾ ಯುವ ವೇದಿಕೆಯು ಶಾಸಕ ಡಿ. ವೇದವ್ಯಾಸ ಕಾಮತ್ ಅವರಿಗೆ ಮನವಿ ಸಲ್ಲಿಸಿತು.
ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷಿಗರನ್ನು, ದೈವಾರಾಧನೆ, ತುಳು ಕಲಾವಿದರ ಕುರಿತು ಅಶ್ಲೀಲ ಪದ ಬಳಕೆ ಮಾಡಿರುವ ಕನ್ನಡಿಗ ಶಿವರಾಜ್ ಎಂಬವರ ಮೇಲೆ ಕಾನೂನು ಕ್ರಮ ಜರಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಶಾಸಕ ಕಾಮತ್, ತಕ್ಷಣವೇ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ತುಳುವರ ನಂಬಿಕೆಗಳನ್ನು ಅಪಹಾಸ್ಯ ಮಾಡುವುದು, ದೈವಾರಾಧನೆಯ ಕುರಿತು ಅಶ್ಲೀಲವಾಗಿ ಬರೆಯುವುದು ಗಮನಕ್ಕೆ ಬಂದಿದೆ. ಈಗಾಗಲೇ ಈ ಕುರಿತು ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅಪರಾಧಿಗಳ ಮೇಲೆ ಕಾನೂನು ಕ್ರಮ ಜರಗಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಬಳಿಕ ಪೊಲೀಸ್ ಆಯುಕ್ತ ಶಶಿಕುಮಾರ್ ಅವರನ್ನು ಭೇಟಿಯಾಗಿರುವ ಯುವ ವೇದಿಕೆಯ ಪ್ರಮುಖರು, ಸೂಕ್ತ ಕ್ರಮ ಕೈಗೊಳ್ಳುವಂತೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಕುರಿತಂತೆ ಈಗಾಗಲೇ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ ಕತ್ತಲ್ಸಾರ್, ತುಳುನಾಡ ದೈವಾರಾಧನೆ ಯುವ ವೇದಿಕೆ ಸಂಚಾಲಕ ಭರತ್ ಬಳ್ಳಾಲ್ಬಾಗ್, ರೋಶನ್ ರೆನಾಲ್ಡ್ , ಸಂತೋಷ್ ಕುಮಾರ್, ತುಳು ರಾಜ್ಯ ಭಾಷೆ ಸಮಿತಿಯ ಚರಿತ್ ಪೂಜಾರಿ, ಮುಂಡಲ ಯುವ ವೇದಿಕೆ ಅಧ್ಯಕ್ಷ ಜಯಚಂದ್ರ ಕೊಟ್ಟಾರಕ್ರಾಸ್, ಸಂಘಟನಾ ಕಾರ್ಯದರ್ಶಿ ರವಿ ಕುದ್ಮುಲ್ ಗಾರ್ಡನ್, ನಂದೀಶ್, ಪ್ರಖ್ಯಾತ್, ನಂದನ್ ಯುವರಾಜ್, ಅಭೀಷ್ ಪ್ರೀತೇಶ್, ಧನುಷ್, ಫ್ರಾನ್ಸಿಸ್ ಡಿಸೋಜಾ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.