ಕಾರ್ಕಳ, ಫೆ 19(SM): ಡೀಮ್ಡ್ ಫಾರೆಸ್ಟ್ನಲ್ಲಿ ಕಾರ್ಯಾಚರಿಸುತ್ತಿದ್ದ ನಾಲ್ಕು ಕರಿಕಲ್ಲಿನ ಕೋರೆಗಳಿಗೆ ವಿವಿಧ ಇಲಾಖಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ನಡೆದಿದೆ.
ನಂದಳಿಕೆ, ಪಳ್ಳಿ ವ್ಯಾಪ್ತಿಯಲ್ಲಿ ಸಿ.ಎಂ.ಜಾಯ್ ಮಾಲಿಕತ್ವದ ಜಾಯ್ ಕ್ರಶರ್, ದಿನೇಶ್ ಶೆಟ್ಟಿ ಮಾಲಿಕತ್ವದ ಶ್ರೀನಿಧಿ ಕ್ರಶರ್, ಗುಂಡ್ಯಡ್ಕದಲ್ಲಿ ಪ್ರಶಾಂತ್ ಕಾಮತ್ ಮಾಲಿಕತ್ವದ ದಾಮೋದರ ಕ್ರಶರ್, ದಿನೇಶ್ ಮಾಲಿಕತ್ವದ ಮಹಾಗಣಪತಿ ಕ್ರಶರ್ಗಳು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯೊಳಗೆ ಕಾರ್ಯಾಚರಿಸುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಈ ಎಲ್ಲಾ ಕ್ವಾರೇಗಳಲ್ಲಿ ಬಿಹಾರ್ ಮತ್ತು ಒರಿಸ್ಸಾದ ಕಾರ್ಮಿಕರು ಕೆಲಸಕ್ಕಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ಬಹುತೇಕ ಮಂದಿ ಪರಾರಿಯಾಗಿದ್ದಾರೆ. ಕೆಲವರನ್ನು ವಶಕ್ಕೆ ತೆಗೆದು ವಿಚಾರಣೆಗೆ ಗುರಿಪಡಿಸಿದ್ದಾರೆ. ಡೀಮ್ಡ್ ಫಾರೆಸ್ಟ್ನೊಳಗೆ ಕ್ವಾರೆಗಳಿಗೆ ಕಾರ್ಯಚರಿಸುತ್ತಿರುವುದರಿಂದ ಹಿಂದೆ ನೀಡಿದ ಅನುಮತಿ ಪತ್ರವನ್ನು ರದ್ದುಪಡಿಸಲಾಗಿತ್ತು.
ಈ ಎಲ್ಲಾ ಘಟನಾವಳಿಯ ಬಳಿಕ ಡಿಸೇಲ್ ಬಳಸಿ ಜನರೇಟರ್ ಉಪಯೋಗಿಸಿ ಕ್ವಾರೆಯನ್ನು ಅಕ್ರಮವಾಗಿ ನಡೆಸುತ್ತಿದ್ದಾರೆಂಬ ಮಾಹಿತಿ ಬೆಳಕಿಗೆ ಬಂದಿದೆ. ತಹಶೀಲ್ದಾರ್ ಮಹಮ್ಮದ್ ಇಸಾಕ್, ಭೂ ಮತ್ತು ಗಣಿ ಇಲಾಖಾಧಿಕಾರಿ ಮಹದೇವ್, ಜಿಲ್ಲಾ ಪೊಲೀಸ್ ಉಪಧೀಕ್ಷಕ ಕೃಷ್ಣಕಾಂತ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು