ಮಂಗಳೂರು, ಅ 31 (DaijiworldNews/MS): ನಗರದ ಫಸ್ಟ್ ನ್ಯೂರೋ ಬ್ರೈನ್ ಆಂಡ್ ಸ್ಪೈನ್ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ವತಿಯಿಂದ ಸಾರ್ವಜನಿಕರಲ್ಲಿ ಪಾರ್ಶ್ವವಾಯು (ಸ್ಟ್ರೋಕ್) ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಶನಿವಾರದಂದು ಎಸಿಪಿ ದಿನಕರ ಶೆಟ್ಟಿ ವಾಹನಕ್ಕೆ ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂಧರ್ಭ ಮಾತನಾಡುತ್ತಾ ಪ್ರಪ್ರಥಮವಾಗಿ ಫಸ್ಟ್ ನ್ಯೂರೋ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಸಂಸ್ಥೆ ಆಯೋಜಿಸಿರುವ ಜಾಗೃತಿ ಅಭಿಯಾನಕ್ಕೆ ಶುಭ ಹಾರೈಸುತ್ತಾ, ಇದೊಂದು ಉತ್ತಮ ಸೇವೆ. ಇಂದಿನ ದಿನಗಳಲ್ಲಿ ಜನರಿಗೆ ಪಾರ್ಶ್ವವಾಯು ರೋಗ ಬರುವ ಬಗ್ಗೆ ಮುನ್ನೆಚ್ಚರಿಕೆ ಮಾಹಿತಿ ನೀಡುವುದರ ಜೊತೆಗೆ ತಕ್ಷಣ ಲಭ್ಯವಿರುವ ಚಿಕಿತ್ಸೆಗಳ ವಿವರಣೆ ಮತ್ತು ಗೋಲ್ಡನ್ ಆವರ್ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯ ಶ್ಲಾಘನೀಯ. ಹಲವರಿಗೆ ಪಾರ್ಶ್ವವಾಯು ರೋಗದ ಬಗ್ಗೆ ಮಾಹಿತಿ ಕೊರತೆಯಿಂದ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ದೇಹದ ಅಂಗಾಂಗಳು ಜೀವನ ಪೂರ್ತಿ ಊನವಾಗುವ ಸಂಭವ ಹೆಚ್ಚು ಇರುತ್ತವೆ. ಈ ನಿಟ್ಟಿನಲ್ಲಿ ಸಂಸ್ಥೆ ಮಾಡುತ್ತಿರುವ ಕೆಲಸ ಅಭಿನಂದನೀಯ. ಕರ್ನಾಟಕ ರಾಜ್ಯದ ೬ ಜಿಲ್ಲೆಗಳಲ್ಲಿ ಮತ್ತು ನೆರೆ ರಾಜ್ಯವಾದ ಕೇರಳದ ೨ ಜಿಲ್ಲೆಗಳಲ್ಲಿ ವಾಹನ ಸಂಚರಿಸಿ ಹಲವು ಕೋಟಿ ಜನತೆಗೆ ಮಾಹಿತಿ ದೊರೆಯುವುದರಿಂದ ಹಳ್ಳಿ ಹಳ್ಳಿಗಳಲ್ಲಿ ಪಾರ್ಶ್ವ ವಾಯು ರೋಗದ ಬಗ್ಗೆ ಜನಜಾಗೃತಿ ಆಗಲಿದೆ ಎಂದರು. ಜೊತೆಗೆ ಸಾರ್ವಜನಿಕರು ಎಚ್ಚೆತ್ತುಕೊಂಡು ಜಾಗೃತಿ ಅಭಿಯಾನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಡಾ. ರಾಘವೇಂದ್ರ ಬಿ.ಎಸ್. ನರರೋಗ ತಜ್ಞರು ಪ್ರಾಸ್ತಾವಿಕವಾಗಿ ಪಾರ್ಶ್ವವಾಯು ಅಭಿಯಾನದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ|| ರಾಜೇಶ್ ಶೆಟ್ಟಿ, ನಿರ್ದೇಶಕರಾದ ಶ್ರೀಮತಿ ರೋಷಿಣಿ ಶೆಟ್ಟಿ, ಶ್ರೀ ರಾಮಚಂದ್ರ ಶೆಟ್ಟಿ, ವೈದ್ಯರುಗಳಾದ ಡಾ|| ರಕ್ಷಿತ್ ಕೆದಂಬಾಡಿ, ಡಾ|| ಸ್ಕಂದ ಮೂರ್ತಿ, ಡಾ|| ಶೃತಿ ಎನ್.ಎಂ., ಡಾ|| ರಂಜನ್ ಎಸ್ ಎಸ್, ಡಾ|| ಮಹಮದ್ ಷಮಿಮ್ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಯಾದ ಶ್ರೀ ರಂಜಿತ್ ಶೆಟ್ಟಿ, ಸಂಸ್ಥೆಯ ಇತರ ವೈದ್ಯರುಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಪತ್ ಕುಮಾರ್ ಅವರು ನಿರೂಪಿಸಿದರು.
ಫಸ್ಟ್ ನ್ಯೂರೊ ಸಂಸ್ಥೆ ವತಿಯಿಂದ ಕರ್ನಾಟಕ ರಾಜ್ಯದಲ್ಲೆ ಪ್ರಥಮ ಬಾರಿಗೆ ಪಾರ್ಶ್ವವಾಯು ಬಗ್ಗೆ (ಸ್ಟ್ರೋಕ್) ಜನ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಮುನ್ನುಡಿ ಇದಾಗಿದ್ದು, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಈ ವಾಹನ ಸಂಚರಿಸಲಿದೆ. ಅಲ್ಲದೆ ಸ್ಥಳದಲ್ಲೇ ಬಿ.ಪಿ. ಮತ್ತು ಶುಗರ್ ಪರೀಕ್ಷೆ ಮಾಡಲಿದ್ದು , ಸುಮಾರು ಒಂದು ಕೋಟಿ ೨೦ಲಕ್ಷ ಜನರನ್ನು ತಲುಪುವ ನಿರೀಕ್ಷೆ ಈ ಅಭಿಯಾನ ಹೊಂದಿದೆ.