ಬೆಳ್ತಂಗಡಿ, ಅ 31 (DaijiworldNews/HR): ಕಲ್ಮಂಜ ಗ್ರಾಮದ ಕಂರ್ಬಿತ್ತಿಲ್ ಎಂಬಲ್ಲಿ ಮನೆಯಿಂದ ತೋಟಕ್ಕೆ ಹೋಗಿದ್ದ ವ್ಯಕ್ತಿ ವಿದ್ಯುತ್ ಅವಘಡಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಕಲ್ಮಂಜ ಗ್ರಾಮದ ಕರಿಯನೆಲ ಕಂರ್ಬಿತ್ತಿಲ್ ನಿವಾಸಿ ಉದಯ ಗೌಡ (43) ಎಂದು ಗುರುತಿಸಲಾಗಿದೆ.
ಉದಯ ಗೌಡ ಅವರ ಸಾವಿಗೆ ವಿದ್ಯುತ್ ಅವಘಡವೇ ಕಾರಣ ಎಂದು ಧರ್ಮಸ್ಥಳ ಪೊಲೀಸರು ಪತ್ತೆಹಚ್ಚಿ, ಮೃತರ ಸಂಬಂಧಿ ಹರೀಶ ಗೌಡ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇನ್ನು ಉದಯ ಗೌಡ ಅವರು ತೋಟಕ್ಕೆ ಹೋಗುವ ದಾರಿ ಮಧ್ಯೆ ಶಿವಪ್ಪ ಗೌಡ ಎಂಬವರ ಪಾಳುಬಿದ್ದ ಗದ್ದೆಯಲ್ಲಿ ಅಸಹಜವಾಗಿ ಮೃತಪಟ್ಟಿದ್ದು, ಈ ಬಗ್ಗೆ ಮೃತರ ಸಹೋದರ ಯೋಗೀಶ ಕೆ ಅವರು ಧರ್ಮಸ್ಥಳ ಪೊಲೀಸರಿಗೆ ನೀಡಿದ ದೂರಿನಂತೆ ಇದೀಗ ಠಾಣೆಯಲ್ಲಿ ಕಲಂ: 304 (A), 139 ಎಲೆಕ್ಟ್ರಿಸಿಟಿ ಆ್ಯಕ್ಟ್ 2003 ,ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ತನಿಖೆ ನಡೆಸಿದ ಧರ್ಮಸ್ಥಳ ಎಸ್.ಐ ಅನಿಲ ಕುಮಾರ್ ಅವರು ಘಟನೆಯ ಹಿನ್ನೆಲೆ ಪತ್ತೆ ಮಾಡಿದ್ದಾರೆ. ಕೃಷಿ ರಕ್ಷಣೆ ಅಥವಾ ಕಾಡುಪ್ರಾಣಿ ಭೇಟೆಗಾಗಿ ಹರೀಶ ಗೌಡ ಅವರ ಪಂಪು ಶೆಡ್ಡ್ನಿಂದ ಅಕ್ರಮವಾಗಿ ವಿದ್ಯುತ್ ಬಳಸಿ ಅದನ್ನು ವಯರ್ ಗೆ ಜೋಡಿಸಿಟ್ಟಿದ್ದು, ಅದನ್ನು ತೋಟಕ್ಕೆ ಹೋಗುವ ದಾರಿಮಧ್ಯೆ ಉದಯ ಗೌಡನು ಸ್ಪರ್ಶಿಸಿದ ಪರಿಣಾಮ ಈ ಸಾವು ಆಗಿದೆ ಎಂದು ಖಚಿತಪಡಿಸಿಕೊಂಡಿದ್ದಾರೆ.
ಈ ಸಂಬಂಧ ಹರೀಶ ಗೌಡ ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇದು ಹರೀಶ ಗೌಡ ಅವರಿಗೆ ಅಪಾಯದ ಅರಿವಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಮಾನವ ಜೀವ ಹಾನಿಗೆ ಕಾರಣವಾದ ಘಟನೆ ಎಂದು ಉಲ್ಲೇಖಿಸಲಾಗಿದೆ.