ವಿಟ್ಲ, ಅ 30 (DaijiworldNews/HR): ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಮನೆಯಲ್ಲಿ ಮಲಗಿದ್ದ ವೇಳೆ 107 ಗ್ರಾಂ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಖತರ್ನಾಕ್ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಣ್ಣೂರಿನ ಮಹಮ್ಮದ್ ಕೆ ಯು(42) ಎಂದು ಗುರುತಿಸಲಾಗಿದೆ.
ಇನ್ನು ಆರೋಪಿಯನ್ನು ವಿಚಾರಿಸಿದಾಗ ಕಳ್ಳತನವಾದ ಸ್ವತ್ತುಗಳನ್ನು ಕಾಸರಗೂಡಿನಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಅದರಂತೆ ಕಾಸರಗೋಡಿನ ಜ್ಯುವೆಲ್ಲರಿ ಅಂಗಡಿಯಿಂದ ಸುಮಾರು 80.10 ಗ್ರಾಂ ನಷ್ಟು ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಅಂದಾಜು ಮೌಲ್ಯ 3,71,600 ರೂಪಾಯಿ ಆಗಬಹುದು ಎನ್ನಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆಯ ವಿವರ:
ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿರುವ ಉಮ್ಮರ್ ಎಂಬವರ ಮನೆಯಲ್ಲಿ ಸಂಬಂದಿಕರು ಹಾಗೂ ಮನೆಯವರು ಮನೆಯಲ್ಲಿ ಇರುವಾಗಲೇ ಮಾರ್ಚ್ 9 ರಂದು ರಾತ್ರಿ ಸಮಯ 11 ಗಂಟೆಯಿಂದ ಬೆಳಗ್ಗಿನ ಜಾವ 4ಗಂಟೆಯ ಮಧ್ಯೆ ಮನೆಯ ಹಿಂಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಒಟ್ಟು 107 ಗ್ರಾಂ ನಷ್ಟು ಚಿನ್ನವನ್ನು ಕಳ್ಳರು ಕಳ್ಳತನ ಮಾಡಿದ್ದು ಕಳವಾಗಿದ್ದ ಅಂದಾಜು ಮೌಲ್ಯ 4,28,000 ರೂಪಾಯಿ ಎಂಬಿತ್ಯಾದಿಯಾಗಿ ನೀಡಿದ ದೂರಿನ ಆಧಾರದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳ್ಳತನ ಪ್ರಕರಣ ದಾಖಲಾದ ಕೂಡಲೇ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನವಣೆ, ಹೆಚ್ಚುವರಿ ಜಿಲಾ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಹಾಗೂ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಪ್ರತಾಪಸಿಂಗ್ ತೋರಟ್ ಅವರ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಾಗರಾಜ್ ಎಚ್. ಇ. ಅವರ ನೇತೃತ್ವದಲ್ಲಿ ಪಿಎಸ್ ಐಗಳಾದ ಸಂದೀಪ್ ಕುಮಾರ್ ಶೆಟ್ಟಿ, ರುಕ್ಮಾ ನಾಯ್ಕ್ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.