ಮಂಗಳೂರು, ಫೆ19 (MSP): ಕೋಟೆಕಾರ್ ನಲ್ಲಿ ನಡೆದ ಜನಬೆಂಬಲ ಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಲೋಬೋ ಕಾರಣರಾದರೆ ತೊಕ್ಕೊಟ್ಟು ಮೇಲ್ಸೇತುವೆ ವಿಳಂಬಕ್ಕೆ ಖಾದರ್ ಕಾರಣ ಇವರ ಜಾತಿ ಮೇಲಿನ ಪ್ರೀತಿಯಿಂದ ಕಾಮಗಾರಿ ವಿಳಂಬವಾಗಿದೆ ಎನ್ನುವ ಹೇಳಿಕೆಗೆ ಮಾಜಿ ಶಾಸಕ ಜೆ.ಆರ್.ಲೋಬೊ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ, ಮಾಜಿ ಶಾಸಕ ಜೆ.ಆರ್.ಲೋಬೊ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ವೈಫಲ್ಯಗಳಿಗೆ ಇತರರು ಕಾರಣ ಎಂಬಂತೆ ದೂರುತ್ತಿದ್ದಾರೆ. ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಲೋಬೋ ನಕ್ಷೆ ಬದಲಾಯಿಸಿ, ಅವರ ಸಮುದಾಯಕ್ಕೆ ಲಾಭ ಮಾಡಲು ಕೆಲಸಕ್ಕೆ ತಡೆ ಒಡ್ಡುತ್ತಿದ್ದಾರೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ನಾನು ಅಥವಾ ಸಚಿವ ಖಾದರ್ ಅವರು ಮೇಲ್ಸೇತುವೆ ಕಾಮಗಾರಿಯ ನಕ್ಷೆ ಬದಲು ಮಾಡಿದ ಸಾಕ್ಷಿ ಇದ್ದರೆ ಅದನ್ನು ಬಹಿರಂಗಪಡಿಸಲಿ. ಅದು ಸಾಧ್ಯವಾಗದಿದ್ದರೆ ಅವರು ನಾನು ಅಥವಾ ನಳಿನ್ ಕುಮಾರ್ ನಂಬುವ ದೇವರ ಮುಂದೆ ಆಣೆ ಪ್ರಮಾಣ ಮಾಡಲು ತಯಾರಾಗಲಿ ಎಂದು ಬಹಿರಂಗ ಸವಾಲು ಹಾಕಿದರು.
ನಳಿನ್ ಅವರ ಸುಳ್ಳಾಟವನ್ನು ಬಯಲು ಮಾಡಲೆಂದೆ ನಾನು ತಯಾರಾಗಿದ್ದೇನೆ, ಅವರು ನೇರವಾದ ರಾಜಕೀಯ ಮಾಡುವ ಬದಲು ಮತ-ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಲು ಹೊರಟಿದ್ದಾರೆ. ಅವರ ವೈಫಲ್ಯವನ್ನು ಜನರ ಮುಂದಿಟ್ಟು ಜಾಗೃತಿಗೊಳಿಸಲಾಗುವುದು ಎಂದು ಅಸಮಧಾನ ವ್ಯಕ್ತಪಡಿಸಿದರು.
ನಾನು ಮತ್ತು ಯು.ಟಿ.ಖಾದರ್ ಮೇಲ್ಸೇತುವೆ ವಿಳಂಬಕ್ಕೆ ಕಾರಣರಾದರೆ ಅದು ಸಂಸದ ನಳಿನ್ಗೆ ಈಗ ತಿಳಿದು ಬಂತೆ ? ಇಷ್ಟು ವರ್ಷ ಅವರಿಗೆ ತಿಳಿದಿಲ್ಲ ಯಾಕೆ? ಮೇಲ್ಸೇತುವೆ ಕಾಮಗಾರಿಗೆ ಸಂಬಂಧಪಟ್ಟಂತೆ ಕಳೆದ 10 ವರ್ಷದಲ್ಲಿ ನಳಿನ್ ಅವರು ಎಷ್ಟು ಸಭೆ ಕರೆದಿದ್ದಾರೆ ಲೆಕ್ಕ ನೀಡಲಿ? ಅವರು ನಡೆಸಿದ ಎಷ್ಟು ಸಭೆಗಳಿಗೆ ಸ್ಥಳೀಯ ಶಾಸಕರು ಎಂಬ ನೆಲೆಯಲ್ಲಿ ನಮ್ಮನ್ನು ಆಹ್ವಾನಿಸಿದ್ದಾರೆ ? ಎಲ್ಲವನ್ನು ಸಂಸದ ನಳಿನ್ ಸವಿವರವಾಗಿ ಬಹಿರಂಗಪಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದೆಡೆ ನಳಿನ್ ಅವರು ಪಂಪ್ ವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆಯನ್ನು ಫೆ.28 ರಂದು ಲೋಕಾರ್ಪಣೆ ಮಾಡುವ ಬಗ್ಗೆ ನಳಿನ್ ಹೇಳಿಕೆ ನೀಡಿದ್ದಾರೆ. ಸಂಸದರು ನಮ್ಮನ್ನೆಲ್ಲಾ ಆಹ್ವಾನಿಸದೆ ಉದ್ಘಾಟನೆಗೆ ತಯಾರಿ ಮಾಡಿಕೊಂಡಿರಬಹುದು. ಅವರು ಹೇಳಿದಂತೆ ಮೇಲ್ಸೇತುವೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಮೊದಲು ಬಿಟ್ಟುಕೊಡಲಿ. ಒಂದು ವೇಳೆ ಎರಡು ಮೇಲ್ಸೇತುವೆಗಳನ್ನು ಹೇಳಿದ ದಿನಾಂಕದಂದು ಸಾರ್ವಜನಿಕರಿಗೆ ಬಿಟ್ಟುಕೊಡಲು ಸಾಧ್ಯವಾಗದಿದ್ದರೆ ಸಂಸದರು ತಮ್ಮ ವಿಫಲತೆಯನ್ನು ಒಪ್ಪಿಕೊಂಡು ಸಾರ್ವಜನಿಕರಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಲಿ ಎಂದರು.
ಮುಂದುವರಿಸಿ ಮಾತನಾಡಿದ ಅವರು, ಕೇಂದ್ರದ ಯೋಜನೆಗಳನ್ನು ಸಚಿವ ಖಾದರ್ ಉದ್ಘಾಟಿಸಿ, ಕೇಂದ್ರ ಸರ್ಕಾರ ಹುಟ್ಟಿಸಿದ ಮಗುವನ್ನು ಸಚಿವ ಯು.ಟಿ ಖಾದರ್ ಮುದ್ದಾಡುತ್ತಾರೆ ಎಂದು ನಳಿನ್ ಅವರು ಆರೋಪಿಸಿದ್ದಾರೆ ಆದರೆ, ಕರಾವಳಿಯಲಿ ಏಳು ಜನ ಬಿಜೆಪಿ ಶಾಸಕರಿದ್ದಾರೆ. ಇವರು ರಾಜ್ಯ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ತಮ್ಮದೆಂದು ಹೇಳಿಕೊಂಡು, ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸುತ್ತಾರೆ ಬ್ಯಾನರ್ ಗಳನ್ನು ಹಾಕುತ್ತಾರೆ, ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹುಟ್ಟಿಸಿದ ಮಗುವನ್ನು ಬಿಜೆಪಿ ಶಾಸಕರು ಆಡಿಸಿದಂತೆ ಆಗುವುದಿಲ್ಲವೇ ಸಂಸದರೇ ? ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಸುರೇಶ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.