ಉಡುಪಿ, ಅ 29 (DaijiworldNews/MS): ನಗರದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಂಡೇಲಿಯ ಪಟೇಲ್ ನಗರದ ನಿವಾಸಿ ಮೌಲಾಲಿ ಜಮಾದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿ ಪ್ರೇಮಾ ಶೇಣವ ಅವರು ಅಕ್ಟೋಬರ್ 3 ರಂದು ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದ ಚಂಡಿಕಾಯಾಗದಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದರು. ಆರೋಪಿ ಜಮಾದಾರ್ ಎಂಜಿಎಂ ಕಾಲೇಜು ಮೈದಾನದ ಬಳಿಯ ನಿರ್ಜನ ಸ್ಥಳದಲ್ಲಿ ಪ್ರೇಮಾ ಅವರ ಕತ್ತಿನಲ್ಲಿದ್ದ 50 ಗ್ರಾಂ ತೂಕದ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಲಭ್ಯ ಸಿಸಿ ಟಿವಿ ಫೂಟೇಜ್ಗಳು ಹಾಗೂ ಮೊಬೈಲ್ ಕರೆ ವಿವರಗಳನ್ನು ಆಧರಿಸಿ ಆರೋಪಿ ಚಿನ್ನಾಭರಣಗಳನ್ನು ಧಾರವಾಡದ ಟೋಲ್ ನಾಕಾದ ಗೋಲ್ಡ್ ಶಾಪ್ವೊಂದರಲ್ಲಿ ಮಾರಾಟ ಮಾಡಿರುವುದು ತಿಳಿದುಬಂತು. ಅಲ್ಲದೆ 2021ರಲ್ಲಿ ಕಡಿಯಾಳಿಯಲ್ಲಿ ವೈದ್ಯರಾದ ಡಾ| ಪ್ರಜ್ಞಾ ಕೆ. ಶ್ರೀಕಾಂತ್ ಅವರ ಮನೆಯಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಆರೋಪಿ ಧಾರವಾಡದಲ್ಲಿ ಮಾರಾಟ ಮಾಡಿದ್ದ ಅಂದಾಜು 3 ಲ.ರೂ. ಮೌಲ್ಯದ 63 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಜೈಲು ವಾಸ ಅನುಭವಿಸಿದ್ದ:
ಆರೋಪಿ ವಿರುದ್ದ ದಾಂಡೇಲಿ ಗ್ರಾಮಾಂತರ ಪೊಲೀಸ್ ಠಾಣೆ, ಬಾಗಲಕೋಟೆ ಜಿಲ್ಲೆಯ ಕಲಾದಗಿ ಪೊಲೀಸ್ ಠಾಣೆ, ಧಾರವಾಡದ ಅಳ್ನಾವರ ಪೊಲೀಸ್ ಠಾಣೆ ಹಾಗೂ ಗೋವಾ ರಾಜ್ಯದ ಮಡಗಾಂವ್ ಮತ್ತು ಪೋಂಡಾ ಪೊಲೀಸ್ ಠಾಣೆಗಳಲ್ಲಿ ಹಲವಾರು ಕಳವು ಪ್ರಕರಣಗಳು ದಾಖಲಾಗಿ, ಬಂಧನಕ್ಕೊಳಗಾಗಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಅಪರಾಧ ವಿಭಾಗದ ಸಿಬಂದಿಗಳಾದ ಸತೀಶ್, ಕಿರಣ್ ಕೆ., ಆನಂದ ಎಸ್., ಹೇಮಂತ್ ಕುಮಾರ್, ಶಿವಕುಮಾರ್ ಎಚ್.ಎಂ., ಮಲ್ಲಯ್ಯ ಹಿರೇಮಠ, ವಿಶ್ವನಾಥ ಶೆಟ್ಟಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ದಿನೇಶ್ ಮತ್ತು ನಿತಿನ್ ಕುಮಾರ್ ಪಾಲ್ಗೊಂಡಿದ್ದರು