ಮಂಗಳೂರು, ಅ 29 (DaijiworldNews/MS):ಏರ್ ಪೋರ್ಟ್ ಗೆ ತೆರಳಲು ಬಸ್ ಇಲ್ಲದ ಕಾರಣ ಪ್ರಯಾಣಿಕರು ಇತರರ ವಾಹನ, ಅಥವಾ ಖಾಸಗಿ ವಾಹನಗಳಿಗೆ ಮೊರೆ ಹೋಗುವಂತಾಗಿತ್ತು. ಆದರೆ ಇನ್ಮುಂದೆ ಈ ಸಮಸ್ಯೆ ನಿವಾರಣೆಯಾಗಲಿದ್ದು, ಮಂಗಳೂರು ಮತ್ತು ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಅ. 31ರಂದು ಆರಂಭಗೊಳ್ಳಲಿದೆ.
ಸೇವೆಗಳನ್ನು ಪರಿಚಯಿಸಲು ಮೈಸೂರಿನಿಂದ ನಾಲ್ಕು ವೋಲ್ವೋ ಬಸ್ಗಳನ್ನು ಇಲ್ಲಿಗೆ ತರಲಾಗಿದ್ದು ,ನಿಗದಿಯಂತೆ ಅ. 27ರಂದು ಸಂಚಾರ ಆರಂಭಗೊಳ್ಳಬೇಕಿತ್ತು. ಆದರೆ ಕೆಲವು ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದು ಅ. 31ರಿಂದ ಈ ಸೇವೆ ಆರಂಭಗೊಳ್ಳಲಿದೆ.
ಈಗಾಗಲೇ ಬಸ್ ತಾತ್ಕಾಲಿಕ ವೇಳಾಪಟ್ಟಿ ತಯಾರಿಸಲಾಗಿದೆ. ಮಂಗಳೂರು ರೈಲು ನಿಲ್ದಾಣ ದಿಂದ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 6.30, 8.45, 11.10, ಮಧ್ಯಾಹ್ನ 3, ಸಂಜೆ 5.15, 7.30ಕ್ಕೆ ಹೊರಡಲಿದೆ. ದರವನ್ನು ರೂ. 100ಕ್ಕೆ ನಿಗದಿಪಡಿಸಲಾಗಿದೆ.
ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಬೆಳಗ್ಗೆ 7.40, 10, ಮಧ್ಯಾಹ್ನ 12.20, ಸಂಜೆ 4.05, 6.25, ರಾತ್ರಿ 08.45ಕ್ಕೆ ಹೊರಡಲಿದೆ. ಜ್ಯೋತಿ, ಲಾಲ್ಬಾಗ್, ಕುಂಟಿಕಾನ, ಕಾವೂರು ಮೂಲಕ ವಿಮಾನ ನಿಲ್ದಾಣಕ್ಕೆ ಸಂಚರಿಸಲಿದೆ.
ಮಣಿಪಾಲದಿಂದ ಎಂಐಎಗೆ ಪ್ರಯಾಣಿಸಲು ರೂ. 300 ದರ ನಿಗದಿಪಡಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಲ್ಲದೆ, ಇತರರು ಸಹ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಮಂಗಳೂರಿನಿಂದ ಮಣಿಪಾಲಕ್ಕೆ ಈ ಹಿಂದೆ ವೋಲ್ವೊ ಬಸ್ ಸೇವೆ ಇತ್ತು. ಆದರೆ ಕಡಿಮೆ ಆದಾಯದ ಹಿನ್ನೆಲೆಯಲ್ಲಿ ಸಂಚಾರ ಮೊಟಕುಗೊಂಡಿತ್ತು. ಈಗ ಮತ್ತೆ ಈ ದಾರಿಯಲ್ಲಿ 2 ಟ್ರಿಪ್ ಕಾರ್ಯಾಚರಿಸಲು ನಿರ್ಧರಿಸಲಾಗಿದೆ. ಕೆಎಸ್ಸಾರ್ಟಿಸಿ ನಿಲ್ದಾಣದಿಂದ ಮಣಿಪಾಲಕ್ಕೆ ಬೆಳಗ್ಗೆ 7ಕ್ಕೆ ಒಂದು ಟ್ರಿಪ್ ಮತ್ತು ಮಧ್ಯಾಹ್ನ 1.15ಕ್ಕೆ ಮಣಿಪಾಲದಿಂದ ಮಂಗಳೂರಿಗೆ ಒಂದು ಟ್ರಿಪ್ ನಡೆಸಲಿದೆ ಟಿಕೆಟ್ ದರ 150 ರೂ. ನಿಗದಿಪಡಿಸಲಾಗಿದೆ.