ಮಂಗಳೂರು, ಅ 28 (DaijiworldNews/DB): 67ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ನಾಡು-ನುಡಿಯ ಹಿರಿಮೆ ಸಾರುವ ಕೋಟಿ ಕಂಠ ಗಾಯನ ಕಾರ್ಯಕ್ರಮ ಮಂಗಳೂರಿನ ವಿವಿಧೆಡೆ ಸಂಭ್ರಮದಿಂದ ಶುಕ್ರವಾರ ನಡೆಯಿತು.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಪಣಂಬೂರು ಕಡಲ ಕಿನಾರೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರ ನೇತೃತ್ವದಲ್ಲಿ ಗೀತ ಗಾಯನ ಕಾರ್ಯಕ್ರಮ ಜರಗಿತು.
ಶಾಸಕ ಡಾ. ವೈ. ಭರತ್ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಅಂಬೆಕಲ್ಲು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಾಣಿಕ್ಯ, ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಮತ್ತಿತರರು ಭಾಗವಹಿಸಿದ್ದರು.
ಕವಿ ಕುವೆಂಪು ಅವರ ನಾಡಗೀತೆ ಮೂಲಕ ಕೋಟಿ ಕಂಠ ಗಾಯನವನ್ನು ಪ್ರಾರಂಭಿಸಲಾಯಿತು. ನಂತರ ಕ್ರಮವಾಗಿ ಹುಯಿಲಗೊಳ ನಾರಾಯಣ್ ರಾವ್ ಅವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ ರಚನೆಯ ಬಾರಿಸು ಕನ್ನಡ ಡಿಂಡಿಮವ, ಡಿ.ಎಸ್. ಕರ್ಕಿ ಅವರ ಹಚ್ಚೇವು ಕನ್ನಡದ ದೀಪ, ಚೆನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾಚೇತನ ಹಾಗೂ ಕೊನೆಯಲ್ಲಿ ಹಂಸಲೇಖ ರಚನೆಯ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನು ಹಾಡುವ ಮೂಲಕ ಕೋಟಿ ಕಂಠ ಗಾಯನವನ್ನು ಯಶಸ್ವಿಗೊಳಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿದರು.
ತೇಲುವ ಹಡಗಿನಲ್ಲಿ ಕೋಟಿ ಕಂಠ ಗಾಯನ
ಹಳೇ ಬಂದರು, ಪಲ್ಗುಣಿ ಹಾಗೂ ನೇತ್ರಾವತಿ ನದಿಗಳು ಸಾಗರ ಸೇರುವ ಸಂಗಮದಲ್ಲಿ ಕರಾವಳಿ ಪ್ರಾಧಿಕಾರದ ವತಿಯಿಂದ ತೇಲುವ ಹಡಗಿನಲ್ಲಿ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮವು ಮನಸೂರೆಗೊಂಡಿತು.
ಉದ್ಘಾಟಿಸಿ ಮಾತನಾಡಿದ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖ್ಯಮಂತ್ರಿಗಳ ಆಶಯದಂತೆ ಹಾಗೂ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನ ಸೆಳೆದಿರುವ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲ್ ಕುಮಾರ್ ಅವರ ನಿರ್ದೇಶನದಂತೆ ಈ ಬಾರಿ ತೇಲುವ ಹಡಗಿನಲ್ಲಿ ಕರಾವಳಿಯ ನದಿ ಮತ್ತು ಸಮುದ್ರ ಸಂಗಮವಾಗುವ ಸ್ಥಳದಲ್ಲಿ ಈ ರೀತಿಯ ವಿಶೇಷ ಕಾರ್ಯಕ್ರಮ ಸಂಯೋಜಿಸಲಾಗಿದೆ. ನದಿಗಳು ಸಂಗಮಗೊಂಡು ಸಮುದ್ರ ಸೇರುವ ಪುಣ್ಯ ತಾಣದಲ್ಲಿ ತೇಲುವ ಹಡಗಿನಲ್ಲಿ ಕನ್ನಡ ಗೀತೆಗಳನ್ನು ಮೊಳಗಿಸಲಾಗುತ್ತಿದೆ ಎಂದರು.
ಎಎಸ್ಪಿಇಎನ್ ಕಂಪೆನಿ (ಎಸ್ಇಜೆಡ್) ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ನೌಕರರ ಸಹಕಾರ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ ನಾಯಕ್ ಶುಭ ಹಾರೈಸಿದರು.
ಬೋಳೂರು ಪರಿಸರದಿಂದ ನೇತ್ರಾವತಿ ಸೇತುವೆವರೆಗೆ ಚಲಿಸುವ ಹಡಗಿನಲ್ಲಿ ಎರಡೂವರೆ ಗಂಟೆಗಳ ಕಾಲ ಗಾಯಕರಾದ ಸೌಮ್ಯ ಭಟ್ ಕಟೀಲು, ರಾಕೇಶ್ ದಿಲ್ಸೆ, ಬಾಲಕೃಷ್ಣ ನೆಟ್ಟಾರು, ಶಮೀರ್ ಮುಲ್ಕಿ, ದೀಪ್ತಿ ದಿಲ್ಸೆ ಅವರ ತಂಡ ನಾಡಗೀತೆ ಸಹಿತ ಕನ್ನಡದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಮಾತೃ ಭಾಷೆ ಕನ್ನಡದಲ್ಲೇ ವ್ಯವಹರಿಸುವ ಬಗ್ಗೆಈ ವೇಳೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ ಸ್ವಾಗತಿಸಿದರು. ಪ್ರಾಧಿಕಾರದ ವಲಯ ಅಧಿಕಾರಿ ಜನಾರ್ದನ್ ವಂದಿಸಿದರು.
ಬಾನೆತ್ತರಕ್ಕೆ ಮೊಳಗಿದ ಕೋಟಿಕಂಠ ಗಾಯನ
ಮಂಗಳೂರು ತಾಲೂಕು ಪಂಚಾಯತ್ ಹಾಗೂ ತಾಲೂಕು ಆಡಳಿತ ಸೌಧ (ಮಿನಿ ವಿಧಾನ ಸೌಧ) ಆವರಣದಲ್ಲಿ ಕವಿ ಕುವೆಂಪು ಅವರ ನಾಡಗೀತೆ ಮೂಲಕ ಕೋಟಿ ಕಂಠ ಗಾಯನವನ್ನು ಪ್ರಾರಂಭಿಸಲಾಯಿತು. ಬಳಿಕ ನಿಗದಿತ ಎಲ್ಲಾ ಹಾಡುಗಳನ್ನು ಹಾಡಲಾಯಿತು. ಸಹಾಯಕ ಆಯುಕ್ತ ಮದನ್ ಮೋಹನ್, ತಾಲೂಕು ಉಪ ತಹಶೀಲ್ದಾರ್ ಪುಟ್ಟರಾಜ್ ಸೇರದಂತೆ ಹಲವು ಭಾಗವಹಿಸಿದ್ದರು. ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಲೋಕೇಶ್ ಸಿ. ಸ್ವಾಗತಿಸಿದರು.
ಬೋಟ್ ಗಳಲ್ಲಿ ಕನ್ನಡದ ಕಂಪು
ಶಾಸಕ ಡಿ. ವೇದವ್ಯಾಸ್ ಕಾಮತ್ ಉಸ್ತುವಾರಿಯಲ್ಲಿ ಬೋಳೂರು ನಡೆದ ಸುಲ್ತಾನ್ ಬತ್ತೇರಿಯಲ್ಲಿನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮೊಗವೀರ ಗ್ರಾಮಸಭಾ ಬೋಳೂರು ಹಾಗೂ ಬೆಂಗ್ರೆ ಸಹಭಾಗಿತ್ವದಲ್ಲಿ 50 ಕ್ಕೂ ಮಿಕ್ಕಿ ಬೋಟ್ ಗಳಲ್ಲಿ 500ಕ್ಕೂ ಅಧಿಕ ನಾಗರಿಕರ ಹಾಗೂ ಮೀನುಗಾರರು ಭಾಗವಹಿಸಿದರು. ಬೋಳೂರು ಸುಲ್ತಾನ್ ಬತ್ತೇರಿ ನದಿ ತೀರದ ಸುಂದರ ವಾತಾವರಣದ ವೇದಿಕೆಯಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ಸಮೂಹಗಾನ , ದೇಶ ಭಕ್ತಿ ಗೀತೆ ಮತ್ತು ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಂಡಿತು.
ತೋಟಗಳ ಮಧ್ಯೆ ಅನುರಣಿಸಿದ ಗಾಯನ
ಇನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣ, ನಗರದ ಬೊಕ್ಕಪಟ್ಟಣದಲ್ಲಿರುವ ಬ್ರಹ್ಮ ಬಬ್ಬರ್ಯ ದೈವಸ್ಥಾನದ ಬಳಿಯಿರುವ ಕ್ರೂಸ್ ಆ್ಯಂಡ್ ಡೈನ್ನಲ್ಲಿ, ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು. ಮೂಡಬಿದ್ರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಡಿಕೆ ತೋಟಗಳ ಮಧ್ಯೆ ಕೋಟಿ ಕಂಠ ಗಾಯನ ಜರಗಿತು. ಗ್ರಾಮ ಪಂಚಾಯತ್ ಅಧ್ಯಕ್ಷೆಸುಶೀಲ, ಪಂಚಾಯತ್ ಸದಸ್ಯ ಸಾಧು, ಶಾಲಾ ಮುಖ್ಯ ಶಿಕ್ಷಕಿ ಮಾರ್ಗರೇಟ್ ಡಿಸೋಜಾ, ಅಂಗನವಾಡಿ ಕಾರ್ಯಕರ್ತೆ ಅರುಣ ಮತ್ತಿತರರಿದ್ದರು. ಶಿಕ್ಷಕಿ ಜೆನೆಟ್ ಲೋಬೋ ಸ್ವಾಗತಿಸಿದರು. ಶಿಕ್ಷಕಿ ಮೃದುಲಾ ನಿರೂಪಿಸಿ, ಸಹ ಶಿಕ್ಷಕ ರಂಗನಾಥ್ ವಂದಿಸಿದರು. ಇನ್ನು ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮ ನಡೆಯಿತು.