ಕಳಸ, ಫೆ19 (MSP): ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಹಿರೇಬೈಲ್ ಎಂಬಲ್ಲಿ 50 ಮೀಟರ್ ಆಳದ ಕಂದಕಕ್ಕೆ ಕಾರು ಉರುಳಿ ಬಿದ್ದು ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ಸೈನಿಕರಾದ ಇಬ್ಬರು ಸಹೋದರರು ಮತ್ತು ಅವರ ಪತ್ನಿಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಬಂಟ್ವಾಳದ ಪನೋಲಿಬೈಲ್ ಬೊಳ್ಳಾಯಿ ನಿವಾಸಿ ವಿಶ್ವನಾಥ ರೈ (65) ಪುಷ್ಪಾವತಿ (58) ದಂಪತಿ, ಅವರ ಸಹೋದರ ಉಪ್ಪಿನಂಗಡಿ ಸಮೀಪದ ಬಾರ್ಯ ಗ್ರಾಮದ ಹೆನ್ನಡ್ಕ ನಿವಾಸಿ ರಾಜೀವ ರೈ (63)- ಮಮತಾ (55) ದಂಪತಿ ಎಂದು ಗುರುತಿಸಲಾಗಿದೆ.
ಬಾಳೆಹೊಳೆಯಲ್ಲಿ ಸೋಮವಾರ ರಾತ್ರಿ ನಡೆಯಬೇಕಾಗಿದ್ದ ಹರಕೆಯ ಯಕ್ಷಗಾನ ವೀಕ್ಷಿಸಲು ಇವರೆಲ್ಲರೂ ಬರುತ್ತಿದ್ದರು. ಯಕ್ಷಗಾನ ಆಯೋಜಿಸಿರುವ ಉದ್ಯಮಿ ರವಿ ರೈ ಅವರ ಪತ್ನಿಗೆ ಮೃತರು ಸೋದರ ಮಾವಂದಿರು ಮತ್ತು ಅತ್ತೆಯಂದಿರು ಆಗಿದ್ದಾರೆ.
ಬಂಟ್ವಾಳದಿಂದ ವ್ಯಾಗನರ್ ಕಾರಿನಲ್ಲಿ ಬಂದ ಐವರ ತಂಡವು ಹಿರೇಬೈಲಿನಲ್ಲಿ ಬಾಳೆಹೊಳೆ ತಲುಪುವ ರಸ್ತೆಯ ಬಗ್ಗೆ ವಿಚಾರಿಸಿದ್ದಾರೆ. ಆಗ ಸ್ಥಳೀಯರೊಬ್ಬರು ಹಿರೇಬೈಲು- ಚೆನ್ನಡ್ಲು- ಮಲ್ಲೇಶನಗುಡ್ಡದ ಮೂಲಕ ಬಾಳೆಹೊಳೆ ತಲುಪಬಹುದು ಎಂದು ಮಾಹಿತಿ ನೀಡಿದ್ದಾರೆ. ಅವರು ಹೇಳಿದ ಮಾರ್ಗದಲ್ಲೇ ಸಾಗಿದ ಕಾರು ಹಾಲುಮರದ ತಿರುವಿನಲ್ಲಿ ರಸ್ತೆಗೆ ಹೊಂದಿಕೊಂಡಿರುವ ಕಾಫಿ ತೋಟದ ಒಳಗೆ ಉರುಳಿದೆ. ಕಾರಿನ ಮುಂಭಾಗ 50 ಅಡಿ ಆಳದ ಕಂದಕಕ್ಕೆ ರಭಸವಾಗಿ ಗುದ್ದಿದ ಪರಿಣಾಮ ಗಂಭೀರ ಗಾಯಗೊಂಡ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನ ಮುಂಭಾಗ ಕುಳಿತಿದ್ದ ಸಂಜೀವ ಶೆಟ್ಟಿ ಅವರು ಗಾಯಗೊಂಡಿದ್ದಾರೆ. ಅವರೇ ಕಾರಿನಿಂದ ಇಳಿದು ಮೇಲಕ್ಕೆ ಬಂದು ಘಟನೆಯ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಅವರಿಗೆ ಕಳಸ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಕುಟುಂಬಸ್ಥರ ವಶಕ್ಕೆ ನೀಡಲಾಗಿದೆ. ರಾಜೀವ್ ರೈ ದಂಪತಿಗೆ ಪುತ್ರ, ಪುತ್ರಿ, ವಿಶ್ವನಾಥ ದಂಪತಿಗೆ ಇಬ್ಬರು ಪುತ್ರಿಯರು ಇದ್ದಾರೆ.