ಉಡುಪಿ, ಅ 28 (DaijiworldNews/HR): ಕರ್ನಾಟಕ ರಾಜ್ಯದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿಯಾಗಿ ಆಯೋಜಿಸಿದ್ದ ಮಹತ್ವಾಕಾಂಕ್ಷಿ 'ಕೋಟಿ ಕಂಠ ಗೀತ ಗಾಯನ' ಅಭಿಯಾನಕ್ಕೆ ಉಡುಪಿ ಜಿಲ್ಲೆಯಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೀನು ಮಾರಾಟ ಫೆಡರೇಶನ್, ಮಹಾಲಕ್ಷ್ಮೀ ಬ್ಯಾಂಕ್ ಸಹಯೋಗದಲ್ಲಿ ಮಲ್ಪೆಯಲ್ಲಿ ಸಮುದ್ರ ದ ನಡುವೆ ನಡೆದ ವಿಶಿಷ್ಟ ಕಾರ್ಯಕ್ರಮದಲ್ಲಿ 145ಕ್ಕೂ ಆಧಿಕ ಬೋಟ್ ಗಳಲ್ಲಿ ಸುಮಾರು 4 ಸಾವಿರಕ್ಕೂ ಮಿಕ್ಕಿ ಜನ ಏಕಕಾಲದಲ್ಲಿ ಕನ್ನಡ ಹಾಡುಗಳನ್ನು ಹಾಡಿ ವಿಶಿಷ್ಟವಾದ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಉಡುಪಿ ಮತ್ತು ದ.ಕನ್ನಡ ಮೀನು ಮಾರಾಟ ಫೆಡರೇಷನ್ ಆಧ್ಯಕ್ಷ ಯಶ್ ಪಾಲ್ ಸುವರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಖೇ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು , ಮೀನುಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಕನ್ನಡ ಬಾವುಟದಿಂದ ಅಲಂಕರಿಸಿದ ಬೋಟ್ ನಲ್ಲಿ ಸಂಗೀತ ಕಲಾವಿದರೊಂದಿಗೆ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿಗಳು ಕನ್ನಡ ಗೀತೆಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.
ಮಣಿಪಾಲದ ವಿಶಾಲವಾದ ಮಣಿಪಾಲ್ ಗ್ರೀನ್ಸ್ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಳಿ ಕೋಟ್, ಸೆತೆಸ್ಕೋಪ್ ಧರಿಸಿದ ಸುಮಾರು 5 ಸಾವಿರಕ್ಕೂ ಮಿಕ್ಕಿ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಕನ್ನಡ ಹಾಡುಗಳನ್ನು ಪ್ರಸ್ತುತಪಡಿಸಿದರು. ಶಾಸಕ ರಘುಪತಿ ಭಟ್ ಭಾಗವಹಿಸಿದ್ದರು.
ಮಾತ್ರವಲ್ಲದೇ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು, ಮತ್ತು ಡಾಕ್ಟರ್ ವಿ.ಎಸ್.ಆಚಾರ್ಯ ಪ್ರತಿಮೆ ಬಳಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಕಾರ್ಯಕ್ರಮಗಳು ಜರಗಿದವು. ವಿಶೇಷವಾಗಿ ಉಡುಪಿಯ ಪ್ರೇಕ್ಷಣಿಯ ಸ್ಥಳವಾದ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಕೂಡಾ ಉಡುಪಿ ನಗರಸಭೆಯ ವತಿಯಿಂದ ಕಾರ್ಯಕ್ರಮವು ಜರಗಿತು.
ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಪೊಲಿಸ್ ಬ್ಯಾಂಡ್ ನೊಂದಿಗೆ ಸುಮಾರು 5 ಸಾವಿರ ಮಂದಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಕಾರ್ಯಕ್ರಮವು ಜರಗಿತು. ಇದೇ ರೀತಿ ಉಡುಪಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಸಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ 3000 ಮಂದಿ ಕಾರ್ಮಿಕರೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಪರ ಜಿಲ್ಲಾದಿಕಾರಿ ವೀಣಾ ಬಿ.ಎನ್. ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊAದಿಗೆ ಭಾಗವಹಿಸಿದ್ದರು.
ಉಡುಪಿ ನಗರಸಭೆಯಿಂದ ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭೆಯ ಸದಸ್ಯರುಗಳು, ಪೌರಾಯುಕ್ತ ಉದಯ ಕುಮಾರ್ ಶೆಟ್ಟಿ , ನಗರಸಭೆಯ ಸಿಬ್ಬಂದಿ ಭಾಗವಹಿಸಿದ್ದರು
ನಿಟ್ಟೆ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು, ಬೀಡನಗುಡ್ಡೆಯ ಮಹಾತ್ಮಗಾಂಧೀ ಬಯಲು ರಂಗ ಮಂದಿರಲ್ಲಿ ಕಟ್ಟಡ ಕಾರ್ಮಿಕರು, ಉಡುಪಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂ¨ ಕಲ್ಯಾಣ ಇಲಾಖೆ, ನಿಟ್ಟೂರಿನ ಸರ್ಕಾರಿ ರಾಜ್ಯ ಮಹಿಳಾ ನಿಲಯ, ಕಾರ್ಕಳದ ಅತ್ತೂರು ಚರ್ಚ್, ಚತುರ್ಮುಖ ಬಸದಿ, ಗೊಮ್ಮಟಬೆಟ್ಟ, ಆನೆಕೆರೆ ಬಸದಿ, ವರಂಗ ಬಸದಿ, ಕಾಪು ಜೂನಿಯರ್ ಕಾಲೇಜು ಮೈದಾನ, ಬಂಟಕಲ್ ಇಂಜಿನಿಯರ್ ಕಾಲೇಜು , ಕುಂದಾಪುರ ಜೂನಿಯರ್ ಕಾಲೇಜು ಮೈದಾನ, ಬೈಂದೂರು ಗಾಂಧೀ ಮೈದಾನ, ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಗ್ರಂಥಾಲಯಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ರೈಲ್ವೆ ನಿಲ್ದಾಣ, ಆಟೋ ನಿಲ್ದಾಣ, ಬಸ್ ನಿಲ್ದಾಣ, ಧಾರ್ಮಿಕ ಕೇಂದ್ರಗಳಲ್ಲಿ, ಬ್ಯಾಂಕ್ , ಎಲ್.ಐ.ಸಿ ಕಚೇರಿಗಳಲ್ಲಿ ಕೋಟಿ ಕಂಠ ಗಾಯನ ನಡೆಯಿತು.
ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂನತ ವಿದ್ಯಾ ಚೇತನ,ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳ ಗಾಯನ ಹಾಗೂ ಕನ್ನಡ ಭಾಷೆಯನ್ನು ಉಳಿಸಿ ಬೆಳಸುವ ಕುರಿತು ಸಂಕಲ್ಪ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು.