ಉಡುಪಿ, ಅ 28 (DaijiworldNews/MS): ಅಲ್ಲಿ ಸಡಗರ ಮನೆ ಮಾಡಿತ್ತು. ಮದುವೆ ಮನೆ ಎಂದರೆ ಕೇಳಬೇಕೇ ಸಂಭ್ರಮವೇ ಹೆಚ್ಚು, ಆದರೆ ಈ ಮದುವೆಯಲ್ಲಿ ಸಂಬಂಧಿಕರ , ಪೋಷಕರ ಕೊರತೆಯನ್ನು ನಿವಾರಿಸಿದ್ದು ಮಾತ್ರ ಜಿಲ್ಲಾಡಳಿತ, ಅಧಿಕಾರಿಗಳ ವರ್ಗ ಮತ್ತು ಹಿತೈಷಿಗಳು .!
ಸಾಂಪ್ರದಾಯಿಕ ವಾತಾವರಣದಲ್ಲಿ ಸಂಪ್ರದಾಯ ಬದ್ಧವಾಗಿ ಅಧಿಕಾರಿಗಳೇ ಸಂಬಂಧಿಕರ ಸ್ಥಾನದಲ್ಲಿ ನಿಂತು ಅನಾಥ ಯುವತಿಯನ್ನು ಧಾರೆಯೆರೆದು ಕೊಟ್ಟು ಆಕೆಯ ಬಾಳಿಗೆ ಬೆಳಕು ನೀಡಿದ್ದು ವಿಶೇಷವಾಗಿತ್ತು.
ಮನೆಯವರಿಂದ ದೂರವಾಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ನಿಟ್ಟೂರು ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿರುವ 25ರ ಹರೆಯದ ಯುವತಿ ಜಯಶ್ರಿಯನ್ನು ಹೊರ ಜಿಲ್ಲೆಯ ಕೃಷಿ ಕುಟುಂಬದ ಹಿನ್ನೆಲೆಯ 29ರ ಹರೆಯದ ಯುವಕ ಮಲ್ಲೇಶ ಡಿ.ಎಲ್. ಅವರ ವಿವಾಹ ಅ. ೨೮ ರ ಶುಕ್ರವಾರ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ನಿಲಯ, ಉಡುಪಿ ವತಿಯಿಂದ ಉಡುಪಿ ನಿಟ್ಟೂರು ಸರ್ಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ನಡೆಯಿತು.
ಅನಾಥ ಯುವತಿಯನ್ನು ವಿವಾಹವಾಗುವುದಾಗಿ ಯುವಕನೇ ಮದುವೆಯ ಪ್ರಸ್ತಾವ ಇಟ್ಟ ಹಿನ್ನಲೆ, ಆತನ ಜಿಲ್ಲೆಯ ಅಧಿಕಾರಿಗಳ ಮೂಲಕ ಯುವಕನ ಗುಣ-ನಡತೆ, ಕುಟುಂಬಿಕರ ಬಗ್ಗೆ ಮಾಹಿತಿ ಕಲೆಹಾಕಲಾಯಿತು. ಈ ವರದಿಗಳನ್ನು ರಾಜ್ಯ ಮಹಿಳಾ ನಿಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರೂ ಆಗಿರುವ ಉಡುಪಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿ ಅನುಮೋದನೆ ನೀಡಿತ್ತು, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ವಿವಾಹಕ್ಕೆ ಒಪ್ಪಿಗೆ ನೀಡಿದ್ದರು.
ಕರ್ನಾಟಕದ ಸರಕಾರದ ಲಾಂಛನ, ಆದಿ ಪೂಜಿತ ಗಣಪತಿ ದೇವರ ಚಿತ್ರದೊಂದಿಗೆ ಕರ್ನಾಟಕ ಸರಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ನಿಲಯ, ಉಡುಪಿ ಆಯೋಜಕರು. ವಧು-ವರನ ಹೆಸರು ಮುದ್ರಿಸಿ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ , ಸೇರಿದಂತೆ ಅಧಿಕಾರಿ, ಸಿಬಂದಿ ವರ್ಗಕ್ಕೆ ಆಮಂತ್ರಣ ಪತ್ರಿಕೆ ಹಂಚಲಾಯಿತು. ಇಂದು ಹಲವು ದಾನಿಗಳ ಸಹಕಾರದೊಂದಿಗೆ ಅನಾಥ ಯುವತಿಯ ವಿವಾಹ ಅದ್ದೂರಿಯಾಗಿ ನೆರವೇರಿದೆ.