ಉಳ್ಳಾಲ, ಫೆ 18(SM): ಜನನಿಬಿಡ ಪ್ರದೇಶವಾದ ಉಳ್ಳಾಲ ಬೈಲ್ನಲ್ಲಿ ಸಂಘಪರಿವಾರದ ಸಂಘಟನೆಯೊಂದು ಅಳವಡಿಸಿದ ಫ್ಲೆಕ್ಸ್ ಒಂದನ್ನು ಉಳ್ಳಾಲ ಪೊಲೀಸರು ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ದೇಶದ ಗಡಿಕಾಯುವ ಸೈನಿಕರ ಮೇಲೆ ದಾಳಿ ನಡೆಸಿ ಹತೈಗೈದ ಕೃತ್ಯಕ್ಕೆ ಸಂಬಂಧಿಸಿ ಹಿಂದೂ ಸಂಘಟನೆಯೊಂದು ಉಳ್ಳಾಲ ಬೈಲ್ನ ಶ್ರೀ ವೈದ್ಯನಾಥ ಛತ್ರಪತಿ ಶಾಖೆಯ ವತಿಯಿಂದ ಉಳ್ಳಾಲ ಬೈಲ್ನಲ್ಲಿ ಪ್ರಚೋದನಕಾರಿ ಫ್ಲೆಕ್ಸ್ ಅಳವಡಿಸಿತ್ತು. ‘ದೇಶದ ಯೋಧರ ಸಾವಲ್ಲೂ ಅಲ್ಪಸಂಖ್ಯಾತರ ನಗು, ಶತ್ರುಗಳು ದೇಶದ ಹೊರಗಿಲ್ಲ-ದೇಶದ ಒಳಗಡನೇ ಇದ್ದಾರೆ’ ಎಂದು ಬರೆಯಲಾಗಿತ್ತು.
ಈ ಕುರಿತು ಸ್ಥಳೀಯ ಸಂಘಟನೆಗಳ ಪ್ರಮುಖರು ತಕ್ಷಣ ಉಳ್ಳಾಲ ಪೊಲೀಸರ ಗಮನ ಸೆಳೆದರು. ಅದರಂತೆ ಉಳ್ಳಾಲ ಠಾಣೆಯ ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಶಾಖೆಯ ಪ್ರಮುಖರನ್ನು ಕರೆಯಿಸಿ ಫ್ಲೆಕ್ಸ್ ತೆರವುಗೊಳಿಸಿದರು.