ಕಾರ್ಕಳ, ಅ 27 (DaijiworldNews/HR): ಕರ್ನಾಟಕ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಇವರ ನೇತೃತ್ವದಲ್ಲಿ ವಿಶ್ವದಾದ್ಯಂತ ನೆಲ, ಜಲ ಹಾಗೂ ಆಕಾಶದಲ್ಲಿ ಕೋಟಿ ಕಂಠ ಗಾಯನವು ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಈಗಾಗಲೇ ಹಲವಾರು ಐತಿಹಾಸಿಕ ಸ್ಥಳಗಳು, ಆಸ್ಪತ್ರೆಗಳು, ಮಠಗಳು, ಸರಕಾರಿ ಕಛೇರಿಗಳು, ಶಿಕ್ಷಣ ಸಂಸ್ಥೆಗಳು, ಕಡಲ ಕಿನಾರೆ, ಕಾರ್ಕಳದ ಗೋಮಟೇಶ್ವರ ಬೆಟ್ಟ, ಚತರ್ಮುಖ ಬಸದಿ, ಕೋಟಿ ಚೆನ್ನಯ ಥೀಂ ಪಾರ್ಕ್, ರಾಮ ಸಮುದ್ರ, ಹಿರಿಯಂಗಡಿ ಮಾನಸ್ತಂಭ ಬಸದಿ ಸೇರಿದಂತೆ ಕಾರ್ಕಳ ಮತ್ತು ಹೆಬ್ರಿಯ 34 ಗ್ರಾಮ ಪಂಚಾಯತ್, ಪುರಸಭಾ ಕಛೇರಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ, ವಿದ್ಯಾರ್ಥಿ ಸಮೂಹದಿಂದ ಕೋಟಿ ಕಂಠ ಗಾಯನದ ಯಶಸ್ಸಿಗಾಗಿ ಬಹಳ ಉತ್ಸುಕತೆಯಿಂದ ಸಕಲ ತಯಾರಿ ನಡೆದಿದೆ.
ಕೇವಲ 25 ದಿನದ ಕರೆಗೆ ಸುಮಾರು ಒಂದೂವರೆ ಕೋಟಿ ಜನತೆಯ ಬೆಂಬಲ ವ್ಯಕ್ತವಾಗಿರುವುದು ಅಭೂತಪೂರ್ವವಾಗಿದೆ. ವಿಶೇಷವಾಗಿ ಕಾರ್ಕಳದ ಸಜ್ಜನ ಬಂಧುಗಳು ಕೋಟಿ ಕಂಠ ಗಾಯನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜ್ಯದಲ್ಲೇ ಕಾರ್ಕಳದ ಕೀರ್ತಿಯನ್ನು ಉನ್ನತಮಟ್ಟದಲ್ಲಿ ತಲುಪಿಸಬೇಕು ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.