ಉಡುಪಿ, ಅ 26 (DaijiworldNews/MS): ಪರ್ಕಳ ಇಲ್ಲಿನ ರಾಷ್ಟ್ರೀಯ ಹೆದ್ದಾರಿ. ಕೆನರಾ ಬ್ಯಾಂಕಿನ ತಿರುವಿನಲ್ಲಿ. ಹಳೆ ರಸ್ತೆಗೆ ಸಂಬಂಧಿಸಿದಂತೆ ರಚಿತವಾದ ಏರುದಿಣ್ಣೆ ಏರಲಾಗದೆ ಕಾರೊಂದು ನಿಯಂತ್ರಣ ತಪ್ಪಿ ಹೊಸದಾಗಿ ನಿರ್ಮಿಸಿದ ಆವರಣವಿಲ್ಲದ ಚರಂಡಿ ಏರಿ ನಿಂತ ಘಟನೆ ಬುಧವಾರದ ದಂದು ನಡೆದಿದೆ.
ಉಡುಪಿಯಿಂದ ಬೆಂಗಳೂರಿನ ಕಡೆ ಈ ಕಾರು ಸಂಚರಿಸುತ್ತಿತ್ತು ಎಂದು ತಿಳಿದು ಬಂದಿದೆ. ಇಲ್ಲಿನ ಕೆಳಪರ್ಕಳದ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಪ್ರಸ್ತುತ ವಾಹನ ಸಂಚಾರಕ್ಕೆ ಉಪಯೋಗಿಸುತ್ತಿರುವ ರಸ್ತೆ ಕೂಡಾ ಸಂಪೂರ್ಣ ಹದೆಗೆಟ್ಟಿದೆ. ಆ್ಯಂಬುಲೆನ್ಸ್ ಸೇರಿದಂತೆ ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆ ಯಲ್ಲಿ ಸಂಚಾರ ನಡೆಸುತಿದ್ದು, ಹೊಸದಾಗಿ ಈ ರಸ್ತೆಯಲ್ಲಿ ಸಂಚಾರ ಮಾಡುವ ಚಾಲಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಶಾಸಕರು ಈ ಹಿಂದೆ 15 ದಿನದೊಳಗೆ ಈ ರಸ್ತೆಗೆ ಕಾಂಕ್ರೀಟ್ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಭರವಸೆ ಕೊಟ್ಟು ಇದೀಗ ಮೂರು ತಿಂಗಳು ಕಳೆದಿದೆ. ಈ ಇಳಿಜಾರಿನಲ್ಲಿ ದಿನನಿತ್ಯ ದ್ವಿಚಕ್ರ ವಾಹನ ಚಾಲಕರು ಬೀಳೋದು ವಾಡಿಕೆಯಾಗಿದೆ. ಮಳೆಗಾಲ ಕಳೆದು ಚಳಿಗಾಲ ಪ್ರಾರಂಭವಾದರೂ ಕಾಮಗಾರಿಯಾಗುವ ಲಕ್ಷಣ ಕಾಣುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.