ಕಾಸರಗೋಡು, ಅ 25 (daijiworldNews/HR): ಮಾದಕ ವಸ್ತು ವಿರುದ್ಧ ಕಾನೂನು ಮಾತ್ರವಲ್ಲ ಜಾಗ್ರತಿ ಮುಖ್ಯ ಎಂದು ಕೇರಳ ಸ್ಥಳೀಯಾಡಳಿತ ಸಚಿವ ಎಂ. ಬಿ ರಾಜೇಶ್ ಅಭಿಪ್ರಾಯಪಟ್ಟರು.
ಕೇರಳ ರಾಜ್ಯ ಭಾರತ್ ಸ್ಕೌಟ್ ಮತ್ತು ಗೈಡ್ಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೇರಳ ಅಬಕಾರಿ ಇಲಾಖೆ ವತಿಯಿಂದ ಕಾಸರಗೋಡು ನಗರ ಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ವಿಮುಕ್ತ ನವಕೇರಳ ಸೈಕಲ್ ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರು ಮತ್ತು ಅಬಕಾರಿ ಇಲಾಖೆ ಯಿಂದ ಮಾತ್ರ ಮಾದಕ ವಸ್ತು ವಿರುದ್ಧ ಹೋರಾಟ ಮಾತ್ರವಲ್ಲ ಜಾಗ್ರತಿ ಮುಖ್ಯವಾಗಿದೆ. ಡ್ರಗ್ಸ್ ವಿರುದ್ಧ ಸಾಮೂಹಿಕವಾಗಿ ಸಜ್ಜುಗೊಂಡ ಪ್ರತಿರೋಧ ಬರಬೇಕು. ಇದರ ವಿರುದ್ಧ ಎಲ್ಲ ಜನರು ಜಾಗೃತರಾಗಬೇಕು. ಡ್ರಗ್ಸ್ ವಿರುದ್ಧ ದ್ವಿಮುಖ ಯುದ್ಧ ತಂತ್ರವನ್ನು ಕೇರಳ ಉತ್ತೇಜಿಸುತ್ತಿದೆ ಎಂದರು. ಒಂದಕ್ಕಿಂತ ಹೆಚ್ಚು ಮದ್ಯ ಸೇವನೆ ಪ್ರಕರಣಗಳಲ್ಲಿ ಭಾಗಿಯಾಗಿರುವ 2309 ಜನರ ಪಟ್ಟಿಯನ್ನು ಅಬಕಾರಿ ಇಲಾಖೆ ಸಿದ್ಧಪಡಿಸಿದೆ. ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗುವುದು. ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 14 ರ ನಡುವೆ 1024 ಡ್ರಗ್ ಪ್ರಕರಣಗಳು ದಾಖಲಾಗಿವೆ. 1038 ಜನರನ್ನು ಬಂಧಿಸಲಾಗಿದೆ. 14.5 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಮಾದಕ ವ್ಯಸನದ ವಿರುದ್ಧ ಕೇರಳದ ಹೋರಾಟ ಇನ್ನು ಒಂದು ತಿಂಗಳಲ್ಲಿ ಮುಗಿಯುವುದಿಲ್ಲ. ಕೇರಳದ ಭವಿಷ್ಯ ಛಿದ್ರವಾಗದಿರಲು ಇದೊಂದು ಸುದೀರ್ಘ ಹೋರಾಟವಾಗಿದೆ ಎಂದರು.
ಶಾಸಕ ಎನ್.ಎ.ನೆಲ್ಲಿಕುನ್ನ್ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ ಮತ್ತು ಗೈಡ್ಸ್ ನ ಮಾದಕ ದ್ರವ್ಯ ಸೇವನೆ ವಿರುದ್ಧ ಗ್ರಹ ಸಂದರ್ಶನ ಜಾಗೃತಿ ಕಾರ್ಯಕ್ರಮವನ್ನು ಶಾಸಕ ಸಿ.ಎಚ್. ಕುಞ೦ಬು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕೇರಳ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಕಾರ್ಯದರ್ಶಿ ಎನ್.ಕೆ.ಪ್ರಭಾಕರನ್, ಅಬಕಾರಿ ಇಲಾಖೆ ಉಪ ಆಯುಕ್ತ ಡಿ.ಬಾಲಚಂದ್ರನ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಕೆ.ವಿ.ಪುಷ್ಪಾ, ಕಾಸರಗೋಡು ಡಿಇಒ ಎನ್.ನಂದಿಕೇಶನ್, ಕಾಸರಗೋಡು ಎಇಒ ಆಗಸ್ಟಿನ್ ಬರ್ನಾಡ್, ಕುಂಬಳೆ ಎಇಒ ಯತೀಶ್ಕುಮಾರ್ ರೈ, ಮಂಜೇಶ್ವರ ಎಇಒ ಡಿ., ಕೇರಳ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಆಯುಕ್ತರಾದ ಸಿ.ಅಜಿತ್ ಮತ್ತು ಕೆ.ಅಶಾಲತಾ ಮಾತನಾಡಿದರು. ಅಬಕಾರಿ ಪ್ರಿವೆಂಟಿವ್ ಆಫೀಸರ್ ಎನ್.ಜಿ.ರಘುನಾಥ್ ಮಾದಕ ವ್ಯಸನದ ವಿರುದ್ಧ ಜಾಗೃತಿ ತರಗತಿ ನಡೆಸಿದರು.
ಎಆರ್ ಸ್ಕೌಟ್ ರಾಜ್ಯ ಆಯುಕ್ತ ಬಾಲಚಂದ್ರನ್ ಸ್ವಾಗತಿಸಿ, ಕೇರಳ ಸ್ಕೌಟ್ ಮತ್ತು ಗೈಡ್ಸ್ ಕಾಸರಗೋಡು ಕಾರ್ಯದರ್ಶಿ ಕೆ.ಭಾರ್ಗವಿ ಕುಟ್ಟಿ ವಂದಿಸಿದರು.