ಕೊಲ್ಲೂರು, ಅ 25 (DaijiworldNews/MS): ನಿರಂತರ 24 ಗಂಟೆ ಗುಣಮಟ್ಟದ ವಿದ್ಯುತ್ ನೀಡುವ ಸಲುವಾಗಿ ರಾಜ್ಯದಲ್ಲಿ 200 ಟ್ರಾನ್ಸ್ಪಾರ್ಮರ್ ಬ್ಯಾಂಕ್ಗಳ ನಿರ್ಮಾಣ ಮಾಡಲಾಗಿದೆ. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತಿದೆ. ಜನಸ್ನೇಹಿಯಾಗಿ ಇಂಧನ ಇಲಾಖೆಯನ್ನು ಪರಿವರ್ತಿಸಲಾಗಿದೆ. ಕೊಲ್ಲೂರು ಭಾಗದ ಬಹುದಿನದ ಬೇಡಿಕೆ, ಸುಮಾರು 14.5 ಕೋಟಿ ವೆಚ್ಚದ ವಿದ್ಯುತ್ ಉಪಕೇಂದ್ರಕ್ಕೆ ಇದ್ದ ತೊಡಕುಗಳನ್ನು ನಿವಾರಿಸಿಕೊಂಡು ಕಾರ್ಯರಂಭಗೊಳಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಇದರ ನೂತನ 1*5 ಎಂ.ವಿ.ಎ 33/11 ಕೆವಿ ಕೊಲ್ಲೂರು ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಜನಾನುಕೂಲಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಬೆಳಕು ಯೋಜನೆಯ ಮೂಲಕ ನಿಯಮದಲ್ಲಿ ಸಡಿಲೀಕರಣ ಮಾಡಿ ಪಂಚಾಯಿತಿ ನಿರಪೇಕ್ಷಣ ಪತ್ರ ಇಲ್ಲದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ನ ಆಧಾರದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಒಂದು ವರ್ಷದಲ್ಲಿ 2.5ಲಕ್ಷ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದರು.
ತಿಂಗಳ ಮೂರನೇ ಶನಿವಾರ ವಿದ್ಯುತ್ ಅದಾಲತ್ ಮೂಲಕ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಜನರ ಅಹವಾಲುಗಳನ್ನು ಆಲಿಸಿ ಸಮಸ್ಯೆ ಪರಿಹಾರ ಮಾಡುತ್ತಾರೆ ಎಂದು ಹೇಳಿದ ಸಚಿವರು, ರಾಜ್ಯ ಸರ್ಕಾರ ಇವತ್ತು ವಿದ್ಯಾನಿಧಿ ಯೋಜನೆ ಮೂಲಕ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕೆಲಸ ಮಾಡುತ್ತಿದೆ. ಗ್ರಾಮ ಒನ್ ಕೇಂದ್ರಗಳ ಮೂಲಕ ಜನರಿಗೆ ಹತ್ತಿರದಲ್ಲಿ ಸರ್ಕಾರದ ಸೇವೆಗಳು ಲಭ್ಯವಾಗುತ್ತಿವೆ. ಕಂದಾಯ ಇಲಾಖೆಯ ಮೂಲಕ 72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ಸಿಗುವಂತಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ, ಈ ಭಾಗದ 5 ಗ್ರಾಮಗಳ ಜನರು ವಿದ್ಯುತ್ ವೋಲ್ಟೇಜ್ ಸಮಸ್ಯೆ ಅನುಭವಿಸುತ್ತಿದ್ದರು. 12 ಎಕ್ರೆ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಲೈನ್ ಹೋಗುವುದರಿಂದ ಸಮಸ್ಯೆಯಾಗಿತ್ತು. ಇಂದನ ಸಚಿವ ಸುನಿಲ್ ಕುಮಾರ್ ಅವರ ಮೂಲಕ ಇವತ್ತು ತೊಡಕುಗಳ ನಿವಾರಣೆಯಾಗಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದೆ. 1750 ಪಂಪ್ಸೆಟ್ಗಳಿಗೆ ಅನುಕೂಲವಾಗಿದೆ ಎಂದರು.
ಕಳೆದ ವರ್ಷ ಈ ಭಾಗದ 150 ಮಹಿಳೆಯರು ಬಂದು ನಮ್ಮೂರಲ್ಲಿ ಕಲ್ಲಿಗೆ ಅಕ್ಕಿ ಹಾಕಬೇಕಿದ್ದರೆ ಹುಲಿ ಕೂಗಬೇಕು ಎಂದು ದೂರಿಕೊಂಡರು. ಹುಲಿ ಕೂಗುವುದಕ್ಕೂ ಗ್ರೈಂಡರ್ಗೆ ಅಕ್ಕಿ ಹಾಕುವುದಕ್ಕೂ ಏನು ಸಂಬಂಧ ಎಂದು ನಂತರ ಗೊತ್ತಾಯಿತು. 5 ಗ್ರಾಮಗಳಲ್ಲಿ ಲೋ ವೋಲ್ಟೇಜ್ ಸಮಸ್ಯೆ ಇತ್ತು. ಅರಣ್ಯ ಇಲಾಖೆಯ ಸಮಸ್ಯೆಯಿಂದ ಸಬ್ ಸ್ಟೇಷನ್ ಆರಂಭವಾಗುವುದು ವಿಳಂಬವಾಯಿತು. ಈಗ ಲೋ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದೆ ಎಂದರು.
ದೇಶ ಪ್ರಸಿದ್ಧ ಯಾತ್ರ ಕ್ಷೇತ್ರ ಕೊಲ್ಲೂರಿನಲ್ಲಿ ಭೂಗತ ಕೇಬಲ್ ವ್ಯವಸ್ಥೆಯಾದರೆ ಅನುಕೂಲವಾಗುತ್ತದೆ. ಹಾಗೆಯೇ ಕರ್ಕುಂಜೆ, ವಂಡ್ಸೆ, ಅಂಪಾರು ಭಾಗದಲ್ಲಿಯೂ ವೋಲ್ಟೇಜ್ ಸಮಸ್ಯೆಯಿದ್ದು ಕರ್ಕುಂಜೆಯಲ್ಲಿ ಸಬ್ ಸ್ಟೇಷನ್ ಬೇಡಿಕೆ ಇದೆ. ಇಂಧನ ಸಚಿವರು ಈ ಬೇಡಿಕೆಯನ್ನು ಈಡೇರಿಸಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಗುತ್ತಿಗೆದಾರರಾದ ಜ್ಯೋತಿ ಇಲೆಕ್ಟ್ರಿಕಲ್ ಮಂಗಳೂರು ಇದರ ಡಾ.ಉದಯಚಂದ್ರ ಸುವರ್ಣ ಇವರನ್ನು ಸನ್ಮಾನಿಸಲಾಯಿತು.
ಗೋಳಿಹೊಳೆ ಗ್ರಾ.ಪಂ ಅಧ್ಯಕ್ಷೆ ಇಂದಿರಾ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಭಟ್, ಜಡ್ಕಲ್ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ಎಸ್.ಶೆಟ್ಟಿ, ಇಡೂರು-ಕುಂಜ್ಞಾಡಿ ಗ್ರಾ.ಪಂ.ಅಧ್ಯಕ್ಷ ಅಮೀನ್ ಶೆಟ್ಟಿ, ಕೆರಾಡಿ ಗ್ರಾ.ಪಂ.ಅಧ್ಯಕ್ಷೆ ಗಿರಿಜಾ ಶೆಡ್ತಿ, ಕಾಲ್ತೋಡು ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ಆಚಾರ್ ಉಪಸ್ಥಿತರಿದ್ದರು.
ಸೌಕೂರುವಿನ್ನಲ್ಲಿ ಇತ್ತೀಚೆಗೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ವ್ಯಕ್ತಿಯ ಕುಟುಂಬ 1 ಲಕ್ಷ ಪರಿಹಾರ ನೀಡಲಾಯಿತು. ಅಧೀಕ್ಷಕ ಇಂಜಿನಿಯರ್ ಪಿ.ದಿನೇಶ್ ಉಪಾಧ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಬಿಕಾ ಮಾಲತೇಶ್ ಪ್ರಾರ್ಥಿಸಿದರು. ಕಾರ್ಯನಿರ್ವಹಕ ಇಂಜಿನಿಯರ್ ರಾಕೇಶ ಬಿ ವಂದಿಸಿದರು. ವಿಶ್ವನಾಥ ಕಾರ್ಯಕ್ರಮ ನಿರ್ವಹಿಸಿದರು.