ಕಡಬ, ಅ 24 (DaijiworldNews/DB): ಬೆಡ್ಶೀಟ್ ಮಾರಾಟ ಮಾಡಲು ಬಂದ ಇಬ್ಬರು ಯುವಕರಿಗೆ ಕಾಣಿಯೂರು ಸಮೀಪ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದಡಿ ಬೆಳ್ಳಾರೆ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಪುನೀತ್, ರಾಜು, ಪ್ರಸಾದ್, ಕಿಶೋರ್, ಭವಿತ್ ಮತ್ತು ರಂಜಿತ್ ಬಂಧಿತರು. ಮಂಗಳೂರು ತಾಲೂಕಿನ ಅಡೂರಿನ ರಮೀಜುದ್ದೀನ್ ಮತ್ತು ರಫೀಕ್ ಅವರು ಬೆಡ್ಶೀಟ್ ಮಾರಾಟಕ್ಕೆ ಬಂದು ಮನೆಗೆ ನುಗ್ಗಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿ ಕಾಣಿಯೂರು ಸಮೀಪ ಗುಂಪೊಂದು ವ್ಯಾಪಾರಿಗಳನ್ನು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿತ್ತು. ಸುಮಾರು ಎರಡು ಗಂಟೆ ಕಾಲ ಇಬ್ಬರಿಗೂ ಥಳಿಸಿ, ಬೈಕ್ನ್ನು ಅವರ ಮೇಲೆ ಹತ್ತಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಬ್ಬರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಬೆಡ್ಶೀಟ್ ಮಾರಾಟಕ್ಕೆ ಬಂದ ಇಬ್ಬರು ವ್ಯಾಪಾರಿಗಳು ತನ್ನ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿ ದೋಳ್ಪಾಡಿ ಗ್ರಾಮದ ಕಟ್ಟ ಪರಿಶಿಷ್ಟ ಜಾತಿ ಮಹಿಳೆ ಕೂಡಾ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಂತ್ರಸ್ತೆಯ ಮನೆಗೆ ಸಚಿವ ಅಂಗಾರ ಭೇಟಿ ನೀಡಿ ಮಹಿಳೆಯಿಂದ ಘಟನೆ ಸಂಬಂಧ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಸಚಿವರು, ಮಹಿಳೆಯ ಮೇಲೆ ನಡೆದಿರುವ ಘಟನೆಯನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಕೆಎಫ್ಡಿ, ಎಸ್ಡಿಪಿಐ ಮತ್ತು ಕಾಂಗ್ರೆಸ್ನವರು ಸಾರ್ವಜನಿಕ ವಲಯದಲ್ಲಿ ತಪ್ಪು ಅಭಿಪ್ರಾಯ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ವಾಸ್ತವ ಸತ್ಯ ಮುಚ್ಚಿಟ್ಟು, ಮುಸಲ್ಮಾನರ ಮೇಲೆ ಹಲ್ಲೆ ನಡೆದಿದೆ ಎಂಬುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗುವುದು ಎಂದರು.
ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಚಾರ್ವಾಕ ಸಿ.ಎ. ಬ್ಯಾಂಕ್ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಮತ್ತಿತರರು ಈ ವೇಳೆ ಇದ್ದರು.