ಉಡುಪಿ, ಅ 23 (DaijiworldNews/DB): ರಸ್ತೆ ಸಮಸ್ಯೆಯಿಂದ ರೋಸಿ ಹೋಗಿ ವಾಹನ ಸವಾರರು ಮಣಿಪಾಲ ಅಥವಾ ಉಡುಪಿ ಕಡೆಯಿಂದ ಇಂದ್ರಾಳಿ ರೈಲ್ವೇ ಬ್ರಿಡ್ಜ್ ಮಾರ್ಗವಾಗಿ ಬರುತ್ತಿದ್ದು, ಇಲ್ಲಿ ಅನಗತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುವುದಲ್ಲದೆ, ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಉಡುಪಿ ಮತ್ತು ಮಣಿಪಾಲ ಕಡೆಯಿಂದ ಬರುವ ವಾಹನ ಸವಾರರು ರಸ್ತೆ ಸಮಸ್ಯೆಯಿಂದಾಗಿ ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ಬರುತ್ತಿದ್ದಾರೆ. ಇದರಿಂದ ಇಲ್ಲಿ ಟ್ರಾಫಿಕ್ ಜಾಂ ಸಮಸ್ಯೆ ತಲೆದೋರುತ್ತಿದೆ. ಅಲ್ಲದೆ ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಹೊರ ಜಿಲ್ಲೆಗಳ ಆಂಬುಲೆನ್ಸ್ಗಳು ಇಲ್ಲಿ ಬಂದರೆ ಟ್ರಾಫಿಕ್ ಜಾಂನಲ್ಲಿ ಸಿಲುಕಿ ಪರದಾಡುವ ಪರಿಸ್ಥಿತಿಯಿದೆ. ಹೀಗಾಗಿ ಮಣಿಪಾಲದಲ್ಲೇ ಆಂಬುಲೆನ್ಸ್ಗಳ ಮಾರ್ಗ ಡೈವರ್ಟ್ ಮಾಡಬೇಕಾದ ಅವಶ್ಯವಿದೆ ಎಂದು ಒತ್ತಾಯ ಕೇಳಿ ಬಂದಿದೆ.
ಇನ್ನು ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ಟ್ರಾಫಿಕ್ ಪೊಲೀಸರು ದಂಡ ಹಾಕಲು ಕಾದು ಕುಳಿತಿರುತ್ತಾರೆ. ಇದರಿಂದ ಟ್ರಾಫಿಕ್ ಜಾಂ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ರಸ್ತೆ ವ್ಯವಸ್ಥೆ ಸರಿಯಿಲ್ಲದ ಕಾರಣಕ್ಕಾಗಿ ಈ ರಸ್ತೆಯಾಗಿ ಸಂಚರಿಸುವವರಿಂದ ದಂಡ ವಸೂಲಿ ಮಾಡುವ ಪೊಲೀಸರ ಕ್ರಮ ಸರಿಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಪೊಲೀಸರ ಕಣ್ತಪ್ಪಿಸಿ ಬಸ್ಗಳು ಒಳರಸ್ತೆಗಳಲ್ಲಿ ಸಂಚರಿಸಿ ಅಲ್ಲಿಯೂ ಬ್ಲಾಕ್ ಉಂಟಾಗುತ್ತಿದೆ. ಇಲ್ಲಿ ಯಾವುದೇ ಪೊಲೀಸ್ ವ್ಯವಸ್ಥೆ ಇಲ್ಲ, ಕೇವಲ ಒಬ್ಬ ಪೊಲೀಸ್ ಮಾತ್ರ ನಿಂತಿರುತ್ತಾರೆ ಎಂದು ಸಾರ್ವಜನಿಕರು ಹೇಳಿದ್ದಾರೆ.
ಇನ್ನು ಸಾರ್ವಜನಿಒಕರ ಆರೋಪದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು, ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ಟ್ರಾಫಿಕ್ ಪೊಲೀಸರು ಅನಗತ್ಯ ದಂಡ ವಿಧಿಸುತ್ತಿದ್ದಾರೆಂಬುದು ಸತ್ಯಕ್ಕೆ ದೂರವಾದುದು. ರ್ಯಾಶ್ ಚಾಲನೆ ಮಾಡಿದವರು, ಮೊಬೈಲ್ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವವರ ಗಾಡಿಯನ್ನು ಬದಿಗೆ ಹಾಕಿ ಅವರಿಗೆ ಪೊಲೀಸರು ದಂಡ ವಿಧಿಸುತ್ತಾರೆ. ಆ ಪ್ರದೇಶದಲ್ಲಿ ಪ್ರತಿ ದಿನ ರಾತ್ರಿ, ಹಗಲು ಏಳೆಂಟು ಮಂದಿ ಟ್ರಾಫಿಕ್ ಸಿಬಂದಿ ಇರುತ್ತಾರೆ. ಅಲ್ಲದೆ, ಹಬ್ಬದ ಹಿನ್ನೆಲೆಯಲ್ಲಿ ಜನರು ಮಾರ್ಕೆಟ್, ಶಾಪಿಂಗ್ಗೆ ತೆರಳುವುದು, ಮಳೆಯ ಕಾರಣ, ರಜಾದಿನ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿರುವುದು ಮತ್ತು ರಸ್ತೆ ಅಗಲೀಕರಣ ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿದೆ ಎಂದು ತಿಳಿಸಿದ್ದಾರೆ.
ಈ ಟ್ರಾಫಿಕ್ ಜಾಂನಲ್ಲಿ ಸಿಲುಕಿದೆ ಎನ್ನಲಾದ ಆಂಬುಲೆನ್ಸ್ ಖಾಲಿ ಇದ್ದ ಕಾರಣ ಅದನ್ನು ರೆಗ್ಯುಲರ್ ಟ್ರಾಫಿಕ್ನಲ್ಲಿಯೇ ಕಳುಹಿಸಲಾಗಿದೆ. ರೋಗಿಗಳಿದ್ದ ಆಂಬುಲೆನ್ಸ್ಗೆ ತೆರಳಲು ಸರಿಯಾದ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದವರು ಸ್ಪಷ್ಟಪಡಿಸಿದ್ದಾರೆ.