ಕಾಸರಗೋಡು, ಅ 22 (DaijiworldNews/HR): ಪೋಕ್ಸೊ ನ್ಯಾಯಾಲಯಗಳು ಮಕ್ಕಳ ಬಗ್ಗೆ ಸಂಪೂರ್ಣ ಸಹಾನುಭೂತಿ ಹೊಂದಿರಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾನಗರದಲ್ಲಿ ವಿಶೇಷ ತ್ವರಿತ ನ್ಯಾಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ನ್ಯಾಯವನ್ನು ಸಹಾನುಭೂತಿ ಮತ್ತು ಸ್ವಾಗತಾರ್ಹ ವ್ಯವಸ್ಥೆಯ ಮೂಲಕ ಮಾತ್ರ ಸಾಧಿಸಬಹುದು. ನ್ಯಾಯಾಲಯವು ಉದ್ಘಾಟನೆಗೊಂಡಾಗ, ನ್ಯಾಯವನ್ನು ಪಡೆಯುವ ಮೂಲಭೂತ ಹಕ್ಕು ಮತ್ತಷ್ಟು ಬಲಗೊಳ್ಳುತ್ತದೆ. ಇತರ ನ್ಯಾಯಾಲಯಗಳಿಗಿಂತ ಭಿನ್ನವಾಗಿಪೋಕ್ಸೋ ನ್ಯಾಯಾಲಯಗಳು ಮೊಕದ್ದಮೆಗಳನ್ನು ಶೀಘ್ರವಾಗಿ ತೀರ್ಮಾನಿಸಲಾಗುತ್ತದೆ. ಮಕ್ಕಳು ತಮ್ಮ ಪೋಷಕರಿಂದ ಪಡೆಯುವ ಅದೇ ಕಾಳಜಿಯನ್ನು ಪೋಕ್ಸೊ ನ್ಯಾಯಾಲಯಗಳಿಂದ ಪಡೆಯಬೇಕು. ಮಕ್ಕಳ ಮೇಲಿನ ಯಾವುದೇ ದೌರ್ಜನ್ಯ ದೇಶದ ವಿರುದ್ಧದ ಹಿಂಸೆ. ಮಕ್ಕಳು ಹಿಂಸೆಗೆ ಬಲಿಯಾದಾಗ ಪ್ರಜಾಪ್ರಭುತ್ವದ ಬುನಾದಿ ಅಲುಗಾಡುತ್ತದೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿದರು.
ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶ ಸಿ.ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ.ಎಚ್. ಕುಞ೦ಬು , ಎ.ಕೆ.ಎಂ.ಅಶ್ರಫ್, ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಎನ್.ರಾಜಮೋಹನ್, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಜಿಲ್ಲಾ ಸರಕಾರಿ ಪ್ಲೀಡರ್ ಅಡ್ವ.ಕೆ.ದಿನೇಶ್ ಕುಮಾರ್, ಕಾಸರಗೋಡು ವಕೀಲ ಗುಮಾಸ್ತರ ಸಂಘದ ಅಧ್ಯಕ್ಷ ನಾರಾಯಣ ಮಣಿ ಮಾತನಾಡಿದರು. ಕಾಸರಗೋಡು ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ .ಎಂ.ನಾರಾಯಣ ಭಟ್ ಸ್ವಾಗತಿಸಿ, ಕಾಸರಗೋಡು ಮುಖ್ಯ ನ್ಯಾಯಿಕ ದಂಡಾಧಿಕಾರಿ ಕೆ.ಜಿ.ಉಣ್ಣಿಕೃಷ್ಣನ್ ವಂದಿಸಿದರು.