ಕಾಸರಗೋಡು, ಫೆ 17(SM): ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ಘಟನೆ ರವಿವಾರ ರಾತ್ರಿ ಕಾಸರಗೋಡಿನ ಪೆರಿಯದಲ್ಲಿ ನಡೆದಿದೆ. ಯುವ ಕಾಂಗ್ರೆಸ್ ಕಾರ್ಯಕರ್ತ ಕೃಪೇಶ್(24) ಹಾಗೂ ಶರತ್ ಲಾಲ್(21) ಹತ್ಯೆಯಾದವರು.
ಘಟನೆಯಲ್ಲಿ ಕೃಪೇಶ್ ಸ್ಥಳದಲ್ಲೇ ಮೃತಪಟ್ಟರೆ, ಶರತ್ ಲಾಲ್ ರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ರಸ್ತೆ ಮಧ್ಯೆ ಮೃತಪಟ್ಟಿದ್ದಾರೆ. ರಾತ್ರಿ ಎಂಟು ಗಂಟೆ ಸುಮಾರಿಗೆ ಪೆರಿಯ ಕಲ್ಯೊಟ್ ಎಂಬಲ್ಲಿ ಘಟನೆ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ತಂಡವು ಬೈಕ್ ನ್ನು ಅಡ್ಡಗಟ್ಟಿ ಮಚ್ಚಿನಿಂದ ಇರಿದು ಕೊಲೆ ನಡೆಸಿದೆ.
ಪೂರ್ವದ್ವೇಷ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ.
ಕೃತ್ಯದ ಹಿಂದೆ ಸಿಪಿಎಂನ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೃತ್ಯ ಖಂಡಿಸಿ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ಕಾಸರಗೋಡು ಜಿಲ್ಲೆಯಲ್ಲಿ ಹರತಾಳಕ್ಕೆ ಯುಡಿಎಫ್ ಕರೆ ನೀಡಿದೆ.