ಬೆಳ್ತಂಗಡಿ, ಅ 22(DaijiworldNews/MS): ಬೆಳ್ತಂಗಡಿ ತಾಲೂಕಿನ ಅಭಿವೃದ್ದಿ ದೃಷ್ಟಿಯಿಂದ , ಬೆಳ್ತಂಗಡಿ ಹೃದಯಭಾಗವಾದ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸ್ಥಾಪನೆಗೊಳ್ಳಲಿದೆ.
ಇದಕ್ಕಾಗಿ ರಾಜ್ಯ ಸರಕಾರ ಈಗಾಗಲೇ 12 ಕೋಟಿ ರೂ. ಅನುದಾನವನ್ನು ಮಂಜೂರುಗೊಳಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಸರಕಾರ ಆಡಳಿತಾತ್ಮಾಕ ಅನುಮೋದನೆ ನೀಡಿದೆ.
ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಜನರಿಗೆ ಅನುಕೂಲತೆ ಹಾಗೂ ತಾಲೂಕಿನ ಅಭಿವೃದ್ಧಿಗಾಗಿ ಮತ್ತು ಜಿಲ್ಲೆ, ಹೊರ ಜಿಲ್ಲೆ, ರಾಜ್ಯದ ನಾನಾ ಊರುಗಳಿಗೆ ಸಂಪರ್ಕಿಸುವ ಬಸ್ಗಳು ಬೆಳ್ತಂಗಡಿಯಾಗಿ ಹಾದು ಹೋಗುವ ದೃಷ್ಟಿಯಿಂದ ಸುಮಾರು 1.20 ಎಕರೆ ಸ್ಥಳದಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳಾದ ಮಹಿಳಾ ವಿಶ್ರಾಂತಿ ಕೊಠಡಿ, ತುರ್ತು ಚಿಕಿತ್ಸಾ ಸೌಲಭ್ಯ, ಪೊಲೀಸ್ ರಕ್ಷಣ ವ್ಯವಸ್ಥೆ, ಫೈರ್ ಸೇಫ್ಟಿ, ಸುಸಜ್ಜಿತ ಶೌಚಾಲಯ ಇವೆಲ್ಲದರ ಆವಶ್ಯಕತೆ ಮನಗಂಡು ನೂತನ ನಿಲ್ದಾಣ ರಚನೆಯಾಗಲಿದೆ.
ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಈಗಾಗಲೇ ಅನುದಾನ ಮಂಜೂರುಗೊಂಡಿದ್ದು ಸದ್ಯದಲ್ಲೇ ಕಾಮಗಾರಿಯು ಆರಂಭವಾಗಲಿದ್ದು ಇದಕ್ಕೆ ಪೂರಕವಾಗಿ ನೂತನ ಬಸ್ ನಿಲ್ದಾಣ ನಿರ್ಮಾಣ ಆಗುತ್ತಿರುವು ಸಾರ್ವಜನಿಕರಿಗೆ ಅನುಕೂಲವಾಗಲಿದೆ.