ಮಂಗಳೂರು,ಫೆ 17(MSP): ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ತಮ್ಮ ತಮ್ಮ ಪಕ್ಷದ ಪರ ಪ್ರಚಾರದ ಭರಾಟೆ ಪ್ರಾರಂಭವಾಗುತ್ತದೆ. ಇನ್ನು ತಾವು ಬೆಂಬಲಿಸುವ ಪಕ್ಷಕ್ಕಾಗಿಯೋ , ರಾಜಕಾರಣಿಗಾಗಿಯೋ ಕಾರ್ಯಕರ್ತರೂ ಕೂಡಾ ಶ್ರಮಿಸುತ್ತಿರುತ್ತಾರೆ. ಇದೇ ರೀತಿಯಲ್ಲಿ ಮತ್ತೆ ಪ್ರಧಾನಿಯಾಗಿ ಮೋದಿ ಎಂದು ಹಲವು ಬಿಜೆಪಿ ಪರ ಸಂಘಟನೆಗಳು ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಈ ನಡುವೆ ನಗರದಲ್ಲಿ ನಡೆದ ವಿವಾಹವೊಂದು ಎಲ್ಲರ ಗಮನ ಸೆಳೆಯಿತು.
ಮಂಗಳೂರು ನಗರ ನಿವಾಸಿ ತುಕಾರಾಮ್ ಕಾಮತ್ ಎಂಬವರ ಪುತ್ರಿ ಲಕ್ಷ್ಮೀ ಹಾಗೂ ವಸಂತ್ ಪೈ ಎಂಬವರ ಪುತ್ರ ವಿಶ್ವಾಸ್ ಅವರ ಮದುವೆ ಸಮಾರಂಭದಲ್ಲಿ ಮೋದಿಯವರ ಪರ ಪ್ರಚಾರ ಮಾಡಲಾಯಿತು. ಮದುವೆ ಉಡುಗೊರೆ ಬೇಡ, ಮೋದಿಯವರನ್ನು ಪುನಃ ಪ್ರಧಾನಿಯನ್ನಾಗಿ ಮಾಡಿ ಎನ್ನುವುದು ನಮ್ಮ ಕೋರಿಕೆ, ದಂಪತಿಯ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿ, ದೇಶದ ಉಜ್ವಲ ಭವಿಷ್ಯಕ್ಕಾಗಿ ಮೋದಿಗೆ ಮತ ಎಂದು ಮನೆಮಂದಿಯ ಹೇಳಿಕೆ ನೆರೆದಿದ್ದವರ ಮೆಚ್ಚುಗೆ ಗಳಿಸಿತು. ಇದೇ ರೀತಿ ವಾಕ್ಯವುಳ್ಳ ಪ್ರಧಾನಿಯ ಭಾವಚಿತ್ರವಿರುವ ಬ್ಯಾನರ್ಗಳನ್ನು ಕೂಡಾ ಮುದುವೆ ಸಮಾರಂಭದ ವೇದಿಕೆಯ ಮುಂಭಾಗದಲ್ಲಿ ಹಾಕಲಾಗಿತ್ತು.
ಮದುವೆಯ ಕರೆಯೋಲೆ ಮೋದಿಯವರಿಗೆ ಕಳುಹಿಸಲಾಗಿದ್ದು, ಮದುಮಗಳ ಮನೆಯವರಿಗೆ ಮೋದಿಯವರಿಂದ ಶುಭಾಶಯವೂ ಬಂದಿದೆ.