ಕಾಸರಗೋಡು, ಅ 21 (DaijiworldNews/SM): ಶಾಲಾ ವಿಜ್ಞಾನ ಮೇಳ ಕಾರ್ಯಕ್ರಮ ನಡೆಯುತ್ತಿದ್ದಾಗ ಚಪ್ಪರ ಕುಸಿದು ವಿದ್ಯಾರ್ಥಿಗಳು ಸೇರಿದಂತೆ 59 ಮಂದಿ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಉಪ್ಪಳ ಸಮೀಪದ ಬೇಕೂರು ಸರಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ ನಡೆದಿದೆ.
ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಶಾಲಾ ವಿಜ್ಞಾನ ಮೇಳ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರಲ್ಲಿ 50 ಮಂದಿ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ಈ ಪೈಕಿ 14 ಮಂದಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆ, ಕಾಸರಗೋಡು ಜನರಲ್ ಆಸ್ಪತ್ರೆ ಮೊದಲಾದೆಡೆ ಚಿಕಿತ್ಸೆ ಪಡೆದಿದ್ದಾರೆ.
ಬೇಕೂರು ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನ ಮೇಳ ಆಯೋಜಿಸಲಾಗಿದ್ದು, ಎರಡನೇ ದಿನವಾದ ಶುಕ್ರವಾರ ಈ ಅವಘಡ ನಡೆದಿದೆ. ತಗಡು ಶೀಟ್ ನ ಚಪ್ಪರ ದಿಡಿರನೆ ಕುಸಿದು ಬಿದ್ದಿದ್ದು ಈ ಸಂದರ್ಭದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಚಪ್ಪರ ದಡಿಯಲ್ಲಿದ್ದರು ಎನ್ನಲಾಗಿದೆ. ಕುಸಿದು ಬಿದ್ದಿದ್ದ ಚಪ್ಪರದ ಅವಶೇಷ ಗಳಡಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೊರ ತೆಗೆದು ಆಸ್ಪತ್ರೆಗೆ ತಲುಪಿಸಿದರು.
ದುರಂತ ದಲ್ಲಿ ಕೆಲ ಶಿಕ್ಷಕರು ಮತ್ತು ತೀರ್ಫುಗಾರರಿಗೂ ಗಾಯಗಳಾಗಿವೆ. ಉಪಜಿಲ್ಲೆಯ 100ಕ್ಕೂ ಅಧಿಕ ವಿದ್ಯಾರ್ಥಿಗಳು ಈ ವಿಜ್ಞಾನ ಮೇಳಕ್ಕೆ ಆಗಮಿಸಿದ್ದರು. ಘಟನೆ ನಡೆಯುವ ಸಂದರ್ಭದಲ್ಲಿ ಬಹುತೇಕ ವಿದ್ಯಾರ್ಥಿಗಳು ಊಟಕ್ಕೆ ತೆರಳಿದ್ದರಿಂದ ಭಾರೀ ದುರಂತ ತಪ್ಪಿದೆ ಎನ್ನಲಾಗಿದೆ. ಚಪ್ಪರ ಅಳವಡಿಕೆಯಲ್ಲಿನ ಅವೈಜ್ಞಾನಿಕತೆ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಶಿಕ್ಷಣ ಇಲಾಖಾ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಆದೇಶ ನೀಡಿದ್ದಾರೆ. ತನಿಖೆಯ ಹೊಣೆಗಾರಿಕೆಯನ್ನು ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿರವರಿಗೆ ವಹಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೆನಾ, ಶಿಕ್ಷಣಾಧಿಕಾರಿ ನಂದಿಕೇಶನ್, ದಿನೇಶ್, ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮ್ ದಾಸ್, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.