ಕಡಬ, ಅ 21 (DaijiworldNews/DB): ಬೆಡ್ಶೀಟ್ ಮಾರಾಟಕ್ಕೆಂದು ಹೋಗಿದ್ದ ಯುವಕರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಅವಾಷ್ಯ ಶಬ್ದಗಳಿಂದ ನಿಂದಿಸಿದ ಘಟನೆಕಾಣಿಯೂರು ಗ್ರಾಮದ ಬೆದ್ರಾಜೆಯಲ್ಲಿ ನಡೆದಿದೆ. ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರು ತಾಲೂಕಿನ ಅಡ್ಡೂರು ನಿವಾಸಿ ರಮೀಜುದ್ದೀನ್ ಹಾಗೂ ಆತನ ಸಂಬಂಧಿ ಮಹಮ್ಮದ್ ರಫೀಕ್ ಎಂಬವರು ಗಾಯಗೊಂಡವರು. ಇವರು ಅಕ್ಟೋಬರ್ 20ರಂದು ಕಡಬ ತಾಲೂಕಿನ ಎಡಮಂಗಲ ಹಾಗೂ ದೋಲ್ಪಾಡಿ ಪರಿಸರದಲ್ಲಿ ಬೆಡ್ಶೀಟ್ ಮಾರಾಟಕ್ಕೆಂದು ಕಾರಿನಲ್ಲಿ ಹೋಗಿದ್ದರು. ಈ ವೇಳೆ ಬೆಡ್ಶೀಟ್ ಮಾರಾಟ ವಿಚಾರದಲ್ಲಿ ಮನೆಯೊಂದರಲ್ಲಿದ್ದ ಮಹಿಳೆಯರ ಜೊತೆ ತಕರಾರು ಉಂಟಾಗಿ, ಅಲ್ಲಿಂದ ಮಾರಾಟಗಾರರಿಬ್ಬರೂ ಕಾಣಿಯೂರು ಕಡೆಗೆ ಬರುತ್ತಿದ್ದರು. ಈ ವೇಳೆ ಕಾಣಿಯೂರಿನ ಬೆದ್ರಾಜೆಯಲ್ಲಿ ಮಧ್ಯಾಹ್ನ 2 ಗಂಟೆ ವೇಳೆಗೆ ಗುಂಪೊಂದು ಪಿಕಪ್ ವಾಹನವನ್ನು ರಸ್ತೆಗೆ ಅಡ್ಡಲಾಗಿಟ್ಟು ಬೆಡ್ಶೀಟ್ ಮಾರಾಟಗಾರರ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಇಬ್ಬರನ್ನೂ ಕಾರಿನಿಂದ ರಸ್ತೆಗೆ ಬೀಳಿಸಿ ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣೆ, ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ರಸ್ತೆಯಲ್ಲಿ ಎಳೆದಾಡಿದ್ದಾರೆ. ಇದರಿಂದ ತರಚಿದ ಗಾಯವಾಗಿದ್ದು, ರಕ್ತ ಹೆಪ್ಪುಗಟ್ಟಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಕಾರನ್ನು ಗುಂಪು ಹುಡಿ ಮಾಡಿ ಜಖಂಗೊಳಿಸಿದೆ. ಇದರಿಂದ 1,50,000 ರೂ. ಗಳಷ್ಟು ನಷ್ಟ ಉಂಟಾಗಿದೆ. ಅಲ್ಲದೆ ಕಾರಿನಲ್ಲಿದ್ದ ಬೆಡ್ಶೀಟ್ಗಳನ್ನೂ ಬಿಸಾಡಿದ್ದು, 25 ಸಾವಿರ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.