ಮಂಗಳೂರು,ಫೆ 17(MSP): ವಾಹನಗಳಿಗೆ ನಿಯಮಮೀರಿ ಕರ್ಕಶ ಹಾರ್ನ್ ಅಳವಡಿಸುತ್ತಿದ್ದು ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ ಟ್ರಾಫಿಕ್ ಪೊಲೀಸರು ಶನಿವಾರ ಕಾರ್ಯಾಚರಣೆಗೆ ಇಳಿದಿದ್ದು ಒಟ್ಟಾರೆ 112 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಡಿಸಿಪಿ ಉಮಾ ಪ್ರಶಾಂತ್ ಎಸಿಪಿ ಮಂಜುನಾಥ್ ಶೆಟ್ಟಿ, ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ನಗರದಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ 112 ಪ್ರಕರಣ ದಾಖಲಿಸಿ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಶಬ್ದ ಮಾಡುತ್ತಿದ್ದ 90 ಹಾರ್ನ್ಗಳನ್ನು ಬಸ್ನಿಂದ ಕಳಚಲಾಯಿತು. ಅಲ್ಲದೆ ಕಾರ್ಯಾಚರಣೆಯಲ್ಲಿ 11,100 ರೂ. ದಂಡ ವಿಧಿಸಿದ್ದಾರೆ.
ಈ ಹಿಂದೆ ಹಲವು ಬಾರಿ ಇಂತಹ ಕಾರ್ಯಾಚರಣೆ ನಡೆಸಿದರೂ ಕೆಲವು ದಿನಗಳ ಮಟ್ಟಿಗೆ ನಿಯಮಪಾಲಿಸಿ ಮತ್ತೆ ಎಂದಿನಂತೆ ಕರ್ಕಶ ಧ್ವನಿ ಹೊರಡಿಸುವ ಸಾಧನಗಳನ್ನು ಅಳವಡಿಸಲಾಗುತ್ತದೆ. ಇತ್ತೀಚೆಗೆ ಪೊಲೀಸ್ ಫೋನ್ ಇನ್ ಕಾರ್ಯಕ್ರಮಗಳಲ್ಲಿ ಮತ್ತೆ ಕರ್ಕಶ ಹಾರ್ನ್ ಬಗ್ಗೆ ಹೆಚ್ಚುಹೆಚ್ಚಾಗಿ ದೂರುಗಳು ಬರತೊಡಗಿದ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಖಾಸಗಿ ಬಸ್ಸು ಮಾತ್ರವಲ್ಲದೆ ಕೆ ಎಸ್ ಆರ್ ಟಿಸಿ ಬಸ್ಸುಗಳಲ್ಲಿಯೂ ಕರ್ಕಶ ಹಾರ್ನ್ ವಿರುದ್ದ ಕಾರ್ಯಾಚರಣೆ ನಡೆಯಿತು.