ಬಂಟ್ವಾಳ, ಅ 21 (DaijiworldNews/DB): ಬಂಟ್ವಾಳದ ಮಣಿಹಳ್ಳದಲ್ಲಿ ಇಂದು ಬೆಳಗ್ಗೆ ಬಸ್ ಮತ್ತು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿಟ್ಲ ಮೆಸ್ಕಾಂ ಇಲಾಖೆಯ ಎಇಇ ಪ್ರವೀಣ್ ಜೋಶಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಮಣಿಹಳ್ಳ ಎಂಬ ಪ್ರದೇಶದಲ್ಲಿ ಎರಡು ಕಾರು ಹಾಗೂ ಬಸ್ಗಳ ನಡುವೆ ಇಂದು ಬೆಳಗ್ಗೆ ಭೀಕರ ಅಪಘಾತ ನಡೆದಿತ್ತು. ಕಾರಿನಲ್ಲಿದ್ದ ವಿಟ್ಲ ಮೆಸ್ಕಾಂ ಇಲಾಖೆಯ ಎಇ ಪ್ರವೀಣ್ ಜೋಶಿ ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅವರು ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನ ವೇಳೆಗೆ ಮೃತಪಟ್ಟರು. ಇನ್ನೊಂದು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಂಟ್ವಾಳ ಕಡೆಯಿಂದ ವಗ ಕಡೆಗೆ ಹೋಗುತ್ತಿದ್ದ ಬ್ರಿಝಾ ಕಾರು, ವಗ್ಗದ ಮದ್ದ ಮನೆಯಿಂದ ಬರುತ್ತಿದ್ದ ಮೆಸ್ಕಾಂ ಎಇಇ ಪ್ರವೀಣ್ ಜೋಶಿ ಅವರ ಕಾರುಗಳ ನಡುವೆ ಭೀಕರ ಅಪಘಾತ ನಡೆದಿದೆ. ಬಳಿಕ ಹಿಂಬದಿಯಿಂದ ಬಸ್ ಕಾರುಗಳಿಗೆ ಢಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಫಿಗೋ ಕಾರಿನಲ್ಲಿದ್ದ ಜೋಶಿ ಅವರ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನೊಳಗಿಂದ ತೆಗೆಯಲು ಸಾರ್ವಜನಿಕರು ಹರಸಾಹಸ ಪಡೆಯಬೇಕಾಯಿತು. 112 ಹೊಯ್ಸಳ ಪೋಲೀಸ್ ವಾಹನ ಚಾಲಕ ವಿಶ್ವನಾಥ ಅವರು ಗಾಯಳು ಜೋಶಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವಿಜಯಲಕ್ಷ್ಮಿ ಗ್ರೂಪ್ ನ ಕ್ರೇನ್ ಬಳಸಿ ಅಪಘಾತ ನಡೆದ ವಾಹನಗಳನ್ನು ರಸ್ತೆಯಿಂದ ಬದಿಗೆ ಸೇರಿಸಲಾಯಿತು. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ ಮೂರ್ತಿ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿದ್ದಾರೆ.