ಮಂಗಳೂರು, ಅ 21(DaijiworldNews/MS): ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ಎದುರಾಗಿರುವ ಶೈಕ್ಷಣಿಕ ಸಮಸ್ಯೆಗಳನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅಕ್ಟೋಬರ್ 21 ರಂದು ಶುಕ್ರವಾರ ಇಲ್ಲಿನ ಕ್ಲಾಕ್ ಬಳಿ ಪ್ರತಿಭಟನೆ ನಡೆಸಿತು.
ವಿಶ್ವವಿದ್ಯಾನಿಲಯವು ಫಲಿತಾಂಶಗಳನ್ನು ಪ್ರಕಟಿಸಲು ವಿಳಂಬ ಮಾಡುತ್ತಿದೆ. ಇದಲ್ಲದೆ ಅಂಕಪಟ್ಟಿ ನೀಡುತ್ತಿಲ್ಲ. ಇದರಿಂದ ಅವರ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ ಎಂದು ಎಬಿವಿಪಿ ಆರೋಪಿಸಿದೆ.
2021ರಲ್ಲಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ಇನ್ನೂ 5 ಮತ್ತು 6 ನೇ ಸೆಮಿಸ್ಟರ್ ಅಂಕಪಟ್ಟಿ ಬಂದಿಲ್ಲ.
ಮರುಮೌಲ್ಯಮಾಪನದ ಫಲಿತಾಂಶವನ್ನು ಇದ್ಯಾರ್ಥಿಗಳು ನಿರೀಕ್ಷಿಸುತ್ತಿದ್ದಾರೆ. ಮರುಮೌಲ್ಯಮಾಪನಕ್ಕೆ ಶುಲ್ಕವನ್ನು ಪಾವತಿಸಿದ ನಂತರವೂ ವಿಶ್ವವಿದ್ಯಾಲಯವು ಇನ್ನೂ ಮೌಲ್ಯಮಾಪನವನ್ನು ಪ್ರಾರಂಭಿಸಿಲ್ಲ.
ಇತರೆ ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅಥವಾ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಇನ್ನೂ ಅಂಕಪಟ್ಟಿ ದೊರಕದ ಕಾರಣ ಸಮಸ್ಯೆಯಾಗುತ್ತಿದೆ. ಇದಲ್ಲದೆ ಅಂಕಪಟ್ಟಿ ಸಮಸ್ಯೆಯ ವಿಳಂಬದಿಂದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೇರುವುದು, ಬಸ್ ಪಾಸ್ ಪಡೆಯುವುದರಿಂದ ವಂಚಿತರಾಗಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ.