ಮಂಗಳೂರು, ಅ 21(DaijiworldNews/MS): ಸುಮಾರು 6.39 ಲಕ್ಷ ರೂ. ಮೌಲ್ಯದ ಮೊಬೈಲ್ ಖರೀದಿಸಿ ಹಣ ನೀಡದೆ ವಂಚಿಸಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಹಳೆಯ ಸೆಂಟ್ರಲ್ ಮಾರ್ಕೆಟ್ ಬಳಿ ಮೊಬೈಲ್ ಅಂಗಡಿ ಹೊಂದಿರುವ ಶೇಖ್ ರಿಯಾಝ್ ಎಂಬವರಿಂದ ಕುಂದಾಪುರ ಗಂಗೊಳ್ಳಿಯಲ್ಲಿ ಅಂಗಡಿ ಹೊಂದಿರುವ ಪರಿಚಯದ ಗಯಾಝ್ ಎಂಬಾತ 2021ರ ಫೆ.12ರಂದು ಅಂಗಡಿಗೆ ಆಗಮಿಸಿ 6.39 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಯ 62 ಮೊಬೈಲ್ ಖರೀದಿಸಿದ್ದ. ಬಳಿಕ ಸ್ವಲ್ಪ ಹಣವನ್ನು ಎಟಿಎಂನಿಂದ ವಿದ್ಡ್ರಾ ಮಾಡಿ ತಂದುಕೊಡುವುದಾಗಿ ಹೇಳಿ ಹೋದಾತ ಹಣವನ್ನೂ ನೀಡದೆ, ಮೊಬೈಲ್ ಹಿಂದಿರುಗಿಸದೆ ತಪ್ಪಿಸಿಕೊಂಡಿದ್ದ. ಆತನಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಆಫ್ ಆಗಿತ್ತು. ಮರುದಿನ ಮತ್ತೆ ಕರೆಮಾಡಿದಾಗ ಹಣ ಬರಲು ಬಾಕಿ ಇದೆ. ಬಂದ ತಕ್ಷಣ ಕೊಡುತ್ತೇನೆ ಎಂದು ಹೇಳಿ ದಿನ ದೂಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರದ ದಿನಗಳಲ್ಲಿ ತಾನು ಅಂಗಡಿಯಲ್ಲಿದ್ದ ಸಿಸಿ ಟಿವಿ ಪರಿಶೀಲಿಸಿದಾಗ 57 ಸಾವಿರ ರೂ. ಬೆಲೆ ಬಾಳುವ 3 ಮೊಬೈಲ್ಗಳನ್ನೂ ಯಾರಿಗೂ ತಿಳಿಯದಂತೆ ಗಯಾಝ್ ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ.
ಖರೀದಿಸಿದ ಮೊಬೈಲ್ಗಳ ಹಣ ನೀಡದೆ ವಂಚನೆ ಮಾಡಿವುದಾಗಿ ದೂರಿನಲ್ಲಿ ವಿವರಿಸಲಾಗಿದೆ.