ಉಡುಪಿ, ಅ 20 (DaijiworldNews/DB): ರಾಜ್ಯದ ಬಿಜೆಪಿ ಸರ್ಕಾರದ ಸಚಿವರು, ಶಾಸಕರು ಬಡ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರುವ ನಿಧಿಯಲ್ಲಿ 450 ಕೋಟಿ ರೂ. ಹಣವನ್ನು ಸ್ಲಂ ಬೋರ್ಡ್ ವಸತಿ ನಿರ್ಮಾಣ ಏಜೆನ್ಸಿಗಳಿಗೆ ನೀಡಿರುವ ಕ್ರಮ ಖಂಡನೀಯ ಎಂದಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು), ತತ್ಕ್ಷಣ ಸ್ಲಂ ಬೋರ್ಡ್ಗೆ ನೀಡಲಾದ ಹಣವನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದೆ.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರಾಜ್ಯದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇದುವರೆಗೂ ಲಕ್ಷಾಂತರ ಕಾರ್ಮಿಕರು ಫಲಾನುಭವಿಗಳಾಗಿ ನೋಂದಣಿಯಾಗಿದ್ದಾರೆ. ಅದರಲ್ಲಿ ಸಾವಿರಾರು ಕಾರ್ಮಿಕರು ಹತ್ತಾರು ವರ್ಷಗಳಿಂದ ಮಂಡಳಿಯಿಂದ ಮನೆ ನಿರ್ಮಾಣಕ್ಕೆ ಸಹಾಯಧನಕ್ಕಾಗಿ ಕಾಯುತ್ತಿದ್ದಾರೆ. ಆದರೆ ಅವರಿಗೆ ಯಾವುದೇ ಆರ್ಥಿಕ ನೆರವು ನೀಡಲು ಕ್ರಮ ವಹಿಸದ ಮಂಡಳಿ ಅಧ್ಯಕ್ಷರು ಹಾಗೂ ಕಾರ್ಮಿಕ ಸಚಿವರು, ವಸತಿ ಸಚಿವ ಹಾಗೂ ಬಿಜೆಪಿ ಸಚಿವರ ಒತ್ತಡಕ್ಕೆ ತಲೆಬಾಗಿ ಕೊಳಚೆ ನಿರ್ಮೂಲನ ಮಂಡಳಿ ಮೂಲಕ ನಿರ್ಮಾಣ ಆಗುತ್ತಿರುವ 21 ಸಾವಿರ ಮನೆಗಳಿಗೆ 433 ಕೋಟಿ ರೂ. ಹಣವನ್ನು ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಿರ್ಮಿಸುವ 423 ಮನೆಗಳಿಗೆ 8.33 ಕೋಟಿ ರೂ. ಹಣವನ್ನು ಏಜೆನ್ಸಿದಾರರಿಗೆ ವರ್ಗಾಯಿಸಿ, ಲಕ್ಷಾಂತರ ಬಡ ಕಟ್ಟಡ ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ. ಇದರಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ಸಚಿವರು ಹಾಗೂ ಶಾಸಕರುಗಳು ಅಪಾರ ಪ್ರಮಾಣದ ಹಣವನ್ನು ಕಮಿಷನ್ ರೂಪದಲ್ಲಿ ದೋಚಲು ಹೊಂಚು ಹಾಕಿದ್ದಾರೆ ಎಂಬ ಅನುಮಾನ ಬರುತ್ತದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಸ್ಲಂ ಬೋರ್ಡ್ ಹಾಗೂ ರಾಜೀವ ಗಾಂಧಿ ವಸತಿ ಯೋಜನೆ ಮೂಲಕ ನಿರ್ಮಾಣವಾಗುತ್ತಿರುವ ವಸತಿ ಯೋಜನೆಗೆ ತನ್ನ ಪಾಲಿನ ಹಣವನ್ನು ನೀಡದೇ ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಸೆಸ್ ರೂಪದಲ್ಲಿ ಸಂಗ್ರಹವಾದ ನೂರಾರು ಕೋಟಿ ಬಡವರ ಬೆವರಿನ ಹಣದ ಮೇಲೆ ಕಣ್ಣು ಹಾಕಿರುವುದು ನಾಚಿಕೆಗೇಡಿನ ಸಂಗತಿ. ವಸತಿ ಇಲಾಖೆ ಜವಾಬ್ದಾರಿ ಹೊಂದಿರುವ ಸಚಿವ ವಿ. ಸೋಮಣ್ಣ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಸಿ, ಮನೆ ನಿರ್ಮಿಸುವ ಬದಲು ಸಾವಿರಾರು ನಕಲಿ ಕಟ್ಟಡ ಕಾರ್ಮಿಕರನ್ನು ಮಂಡಳಿಯಲ್ಲಿ ನೋಂದಾಯಿಸಿ, ನೂರಾರು ಕೋಟಿ ರೂಪಾಯಿ ಹಣ ದೋಚಿದ್ದಾರೆ. ಕಾರ್ಮಿಕರ ಹಿತ ಹಾಗೂ ಕಲ್ಯಾಣ ಮಂಡಳಿ ನಿಧಿಯನ್ನು ರಕ್ಷಿಸಬೇಕಾದ ಸಚಿವ ಶಿವರಾಮ ಹೆಬ್ಬಾರ್ ಈಗಾಗಲೇ ಕೋವಿಡ್ ಸಮಯದಲ್ಲಿ ಸಾವಿರಾರು ಕೋಟಿ ರೂಪಾಯಿ ಖರೀದಿಗಳ ಮೂಲಕ ನೂರಾರು ಕೋಟಿ ಹಣದ ಅವ್ಯವಹಾರ ನಡೆಸಿದ್ದಾರೆ. ಈಗ ಸಾಲದೆಂಬಂತೆ ಬಡ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಕಲ್ಯಾಣ ಮಂಡಳಿಯಿಂದ ಅಪಾರ ಮೊತ್ತದ ಹಣವನ್ನು ನೀಡಿ, ತಮ್ಮ ಭವಿಷ್ಯದ ರಾಜಕೀಯ, ಭದ್ರಪಡಿಸಲು ಮುಂದಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಂಡಳಿಯಲ್ಲಿ ಈಗಾಗಲೇ ವಸತಿ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ, ಕಾರ್ಮಿಕರು ಕಾಯುತ್ತಿದ್ದರೂ ಮಂಡಳಿ ಅಧಿಕಾರಿಗಳು ಒಂದು ಸ್ಪಷ್ಟವಾದ ಯೋಜನೆ ರೂಪಿಸದೇ ಸಚಿವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ನೂರಾರು ಕೋಟಿ ನಿಧಿಯನ್ನು ಸ್ಲಂ ಬೋರ್ಡ್ ಏಜೆನ್ಸಿಗಳಿಗೆ ಧಾರೆ ಎರೆದಿದ್ದಾರೆ. ಇದು ಲಕ್ಷಾಂತರ ಬಡ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಮಾಡಿರುವ ಬಹುದೊಡ್ಡ ದ್ರೋಹದ ಕೆಲಸ ಎಂದವರು ಅಸಮಾಧಾನ ತೋಡಿಕೊಂಡರು.
ಉಡುಪಿ ಜಿಲ್ಲೆಯಲ್ಲಿ ನಿರ್ಮಾಣ ಕ್ಷೇತ್ರವು ಮರಳು ಲಭ್ಯತೆಯ ಮೇಲೆ ಅವಲಂಬಿತವಾಗಿದೆ. ಚೆನ್ನೈ ಹಸಿರು ಪೀಠದ ತೀರ್ಪಿನಿಂದಾಗಿ ಸಿಆರ್ಝಡ್ ವಲಯದಲ್ಲಿ ಮರಳುಗಾರಿಕೆ ನಡೆಯುತ್ತಿಲ್ಲ. ಇದರಿಂದ ಮರಳು ಲಭ್ಯತೆ ತೀವ್ರವಾಗಿ ಕುಸಿದಿದ್ದು, ದರದಲ್ಲಿ ತೀವ್ರ ಹೆಚ್ಚಳವಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮವರ್ಗದ ಜನರು ಮನೆ ಕಟ್ಟುವುದನ್ನು ಮುಂದಕ್ಕೆ ಹಾಕುತ್ತಾರೆ. ಇದು ಕಾರ್ಮಿಕರ ಕೆಲಸಕ್ಕೆ ಹಾನಿಯಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಲಿನ ಅಂಶಗಳ ಬಗ್ಗೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಗಮನ ನೀಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಾಲಕೃಷ್ಣ ಶೆಟ್ಟಿ ಹೇಳಿದರು.
ಸಂಚಾಲಕರಾದ ಸುರೇಶ ಕಲ್ಲಾಗರ, ರೊನಾಲ್ಡ್ ಕ್ವಾಡ್ರಸ್ ಉಪಸ್ಥಿತರಿದ್ದರು.