ಉಡುಪಿ, ಫೆ 17(MSP): ‘ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿ 63 ದಿನ ಕಳೆದರೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸರ್ಕಾರ ಮೀನುಗಾರರನ್ನು ಹುಡುಕಿಕೊಡದಿದ್ದರೆ ಕಾರವಾರ ನೌಕಾನೆಲೆಯಲ್ಲಿರುವ ಐಎನ್ಎಸ್ ಕೊಚ್ಚಿನ್ ನೌಕೆಗೆ ಮುತ್ತಿಗೆ ಹಾಕುತ್ತೇವೆ’ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಎಚ್ಚರಿಕೆ ನೀಡಿದರು. ಇದಲ್ಲದೆ ಕರ್ನಾಟಕ ಮುಖ್ಯಮಂತ್ರಿಯವರ ಮನೆಯ ಮುಂದೆ ಧರಣಿ ಕೂರುವ ಆಲೋಚನೆಯನ್ನು ಮಾಡಿದ್ದೇವೆ. ನೌಕಾಪಡೆಯ ಸಮಗ್ರ ತನಿಖೆ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಮೊದಲು ಒತ್ತಡ ತರುತ್ತೇವೆ ಎಂದರು.
ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿದ್ದು ಹಾಗೂ ಐಎನ್ಎಸ್ ನೌಕೆಯ ತಳಭಾಗಕ್ಕೆ ಘಾಸಿಯಾಗಿದ್ದು ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ. ಐಎನ್ಎಸ್ ನೌಕೆಯ ತಳಭಾಗಕ್ಕೆ ಬೋಟ್ನ ರೆಕ್ಕೆಯ ಮಾದರಿ ತಾಗಿತ್ತು ಎಂದು ಹಿಂದೆ ಅಧಿಕಾರಿಗಳು ಹೇಳಿದ್ದರು. ಸೋನಾರ್ ತಂತ್ರಜ್ಞಾನ ನೆರವಿನಿಂದ ಸಮುದ್ರದಾಳದಲ್ಲಿ ಕಾರ್ಯಾಚರಣೆ ನಡೆಸಿದಾಗ ಅದು ರೆಕ್ಕೆಯಲ್ಲ, ಕಲ್ಲುಬಂಡೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅವರ ಮಾತಿನ ಮೇಲೆ ನಂಬಿಕೆಯೇ ಬರುತ್ತಿಲ್ಲ .ಸತ್ಯವನ್ನು ಮುಚ್ಚಿಡುತ್ತಿದ್ದಾರೆ ನೌಕಾಪಡೆ ಅಧಿಕಾರಿಗಳು, ಪೊಲೀಸರು, ಮೀನುಗಾರರ ಸಮಿತಿ ರಚಿಸಿ ಶೋಧ ಕಾರ್ಯಾಚರಣೆ ನಡೆಸಬೇಕು’ ಎಂದು ಕುಂದರ್ ಒತ್ತಾಯಿಸಿದರು.
ನಾಪತ್ತೆಯಾದ ಮೀನುಗಾರರ ಕುಟುಂಬ ಸದಸ್ಯರೊಂದಿಗೆ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬೋಟ್ ಶೋಧ ಕಾರ್ಯಾಚರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮೀನುಗಾರರಿಗೆ ಪ್ರತಿಕ್ರಿಯಿಸಿ ಮಾತನಾಡಿದ ವರಿಷ್ಠಾಧಿಕಾರಿ ಅದು ಪೋಲೀಸ್ ವ್ಯಾಪ್ತಿಗೆ ಒಳಪಡುವುದಿಲ್ಲ. ಅದು ಸಮುದ್ರದಲ್ಲಿ ಘಟನೆ ಸಂಭವಿಸಿರುವುದರಿಂದ ನೌಕಾ ಪಡೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದರು.
ತಾಂಡೇಲ ಸಂಘದ ಅಧ್ಯಕ್ಷ ರವಿ ಮಾತನಾಡಿ, 'ಸರಕಾರ ನಮಗೆ ಇದುವರೆಗೂ ಹೊಸ ಮಾಹಿತಿಯನ್ನು ನೀಡಿಲ್ಲ. ಜಿಲ್ಲಾ ಉಸ್ತುವಾರಿ ನಾಪತ್ತೆಯಾದ ಮೀನುಗಾರರು ಪತ್ತೆಯಾಗುವವರೆಗೂ ಉಡುಪಿ ಬಿಟ್ಟು ಕದಲುವುದಿಲ್ಲ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು. ಆದರೆ ಇದೀಗ ಮೀನುಗಾರರನ್ನು ಹುಡುಕುವ ಬದಲು ಜಿಲ್ಲಾ ಉಸ್ತುವಾರಿ, ಸಂಸದೆಯನ್ನು ಹುಡುಕು ಪರಿಸ್ಥಿತಿ ಎದುರಾಗಿದೆ. ಇನ್ನು ಕೆಲವೇ ದಿನದಲ್ಲಿ ಚುನಾವಣೆ ನೀತಿ ಸಂಹಿತೆ ಘೋಷಣೆಯಾಗಲಿದೆ.ಮುಂದೆ ಏನೂ ಮಾಡಲಾಗದು. ರಾಜ್ಯದ ಮುಖ್ಯಮಂತ್ರಿಯವರಿಗೆ ರೈತರ ಮೇಲಿರುವಷ್ಟು ಕಾಳಜಿ ಮೀನುಗಾರರ ಮೇಲೆ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮೀನುಗಾರ ಸಚಿವರೂ ನಾಪತ್ತೆ ಪ್ರಕರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅವರು ಸೌಜನ್ಯಕ್ಕಾದರೂ ಇದುವರೆಗೆ ಉಸ್ತುವಾರಿ ಸಚಿವರು ಒಂದು ಸಭೆಯನ್ನು ಕರೆದಿಲ್ಲ. ಕರ್ನಾಟಕ ಸರಕಾರ ಮೀನುಗಾರರನ್ನು ನಿರ್ಲಕ್ಷ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ರಪಡಿಸಿದರು.
ಮಂಜುನಾಥ ಹರಿಕಾಂತ್, ಮೀನುಗಾರರ ಮುಖಂಡ ಅಂಕೋಲಾ ಮಾತನಾಡಿ, 'ಸಂಬಂಧ ಪಟ್ಟ ಇಲಾಖೆಗಳಿಗೆ ಸಂಪರ್ಕಿಸದರೂ ಪ್ರಯೋಜನವಿಲ್ಲವಾಗಿದೆ. ತಂತ್ರಜ್ಞಾನ ಇಷ್ಟೊಂದು ಮುಂದುವರಿದರೂ ನಾಪತ್ತೆಯಾದ ಮೀನುಗಾರರು ಪತ್ತೆ ಮಾಡಿಲ್ಲ ಅನ್ನೋದು ಖೇದಕರ ವಿಷಯ, ಹೀಗಾಗಿ ಇತರ ಮೀನುಗಾರರು ನೀರಿಗೆ ಇಳಿಯಲು ಭಯ ಪಡುವಂತಾಗಿದೆ. ಮೊದಲು ಸುಳಿವು ಪತ್ತೆ ಹಚ್ಚಿ, ಇಲ್ಲದೆ ಹೋದರೆ ರಾಜ್ಯ ಸರಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದರು.