ಉಡುಪಿ,ಫೆ 17(MSP): ಕುವೈಟ್ ನಲ್ಲಿ ನಿಷೇಧಿತವಾಗಿರುವ ಔಷಧವನ್ನು ನನ್ನ ಮೂಲಕ ಪಾರ್ಸೆಲ್ ಮಾಡಿಸಿದ ಪರಿಚಿತ ಮುಬಾರಕ್ ಕೊಟ್ಟ ಪಾರ್ಸೆಲ್ ಪರಿಶೀಲಿಸದೆ ಕುವೈತ್ಗೆ ತೆಗೆದುಕೊಂಡು ಹೋಗಿದ್ದಕ್ಕೆ 7 ತಿಂಗಳು ಜೈಲುಶಿಕ್ಷೆ ಅನುಭವಿಸಬೇಕಾಯಿತು’ ಎಂದು ಶಂಕರ ಪೂಜಾರಿ ಅಳಲು ತೋಡಿಕೊಂಡರು.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಮಾಡದ ತಪ್ಪಿಗೆ ಕುವೈತ್ನಲ್ಲಿ ಜೈಲು ಶಿಕ್ಷೆ ಅನುಭವಿಸಿದೆ, ಜೀವನಕ್ಕೆ ಆಧಾರವಾಗಿದ್ದ ಕೆಲಸವನ್ನೂ ಕಳೆದುಕೊಂಡೆ. ಇಷ್ಟಾದರೂ ನನ್ನ ದುಸ್ಥಿತಿಗೆ ಕಾರಣರಾದ ವ್ಯಕ್ತಿಗಳು ಸ್ವಲ್ಪವೂ ಅನುಕಂಪ ತೋರದಿರುವುದು ಬೇಸರ ತಂದಿದೆ’ ಎಂದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮವಾಗಿ ದೋಷಮುಕ್ತಗೊಳಿಸಿತು. ಬಿಡುಗಡೆಗೆ ಕುವೈತ್ನಲ್ಲಿರುವ ಕನ್ನಡ ಸಂಘಟನೆಗಳು, ತುಳು ಸಂಘ, ಬಿಲ್ಲವರ ಸಂಘ ಹಾಗೂ ಕರವೇ ಶ್ರಮ ಅಪಾರ ಎಂದು ಕೃತಜ್ಞತೆ ಸಲ್ಲಿಸಿದರು.
‘ಕಾನೂನು ಸಮರ ಗೆದ್ದರೂ ಮರಳಿ ಕೆಲಸ ನೀಡಲು ಕುವೈತ್ನ ಕಂಪನಿ ಒಪ್ಪಲಿಲ್ಲ. ಹಾಗಾಗಿ, ಭಾರತಕ್ಕೆ ಮರಳಬೇಕಾಯಿತು. ತಿಂಗಳಿನಿಂದ ಉದ್ಯೋಗ ಇಲ್ಲದೆ ಅಲೆಯುತ್ತಿದ್ದೇನೆ.ನನ್ನ ಮೂಲಕ ಪಾರ್ಸೆಲ್ ಮಾಡಿದ ಉಡುಪಿಯ ಮುಬಾರಕ್ ಅವರು ಪರಿಹಾರ ನೀಡಬೇಕು, ಇಲ್ಲವಾದರೆ ನನ್ನ ಪರಿಸ್ಥಿತಿಗೆ ಕಾರಣರಾದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ’ ಎಂದು ಶಂಕರ ಪೂಜಾರಿ ತಿಳಿಸಿದರು. ಬಿಡುಗಡೆಯಾಗಿ ಊರಿಗೆ ಬಂದ ನಂತರವೂ ಮುಬಾರಕ್ ಅವರು ಸೌಜನ್ಯಕ್ಕೆ ಕೂಡಾ ಕರೆ ಮಾಡಿಲ್ಲ. ಉದ್ಯೋಗ ಕಳೆದುಕೊಂಡಿದ್ದೇನೆ, ಕಾನೂನು ಹೋರಾಟಕ್ಕೆ ಮಾಡಿದ ಖರ್ಚು ನಾನು ಆರ್ಥಿಕವಾಗಿ ಸಂಕಷ್ಟಕ್ಕೀಡುಮಾಡಿದೆ ಎಂದು ಅಳಲುತೋಡಿಕೊಂಡರು.
ಪತ್ನಿ ಜ್ಯೋತಿ ಮಾತನಾಡಿ, ‘ಪತಿ ಬಿಡುಗಡೆಯಾಗಿದ್ದು ಒಂದೆಡೆ ಸಂತೋಷ. ಆದರೆ, ನಮ್ಮದಲ್ಲದ ತಪ್ಪಿಗೆ 7 ತಿಂಗಳು ಕುಟುಂಬ ಯಾತನೆ ಅನುಭವಿಸಿತು. ಪತಿಯನ್ನು ಜೈಲಿನಿಂದ ಮುಕ್ತಗೊಳಿಸಲು ಕಾನೂನು ಹೋರಾಟಕ್ಕೆ ಮಾಡಿದ ಸಾಲದ ಹೊರೆ ಹೆಚ್ಚಾಗಿದೆ. ಇಷ್ಟಾದರೂ ಸಮಸ್ಯೆಗೆ ಕಾರಣರಾದವರು ನೆರವಿಗೆ ಬಾರದಿರುವುದು ಬೇಸರ ತಂದಿದೆ ಎಂದರು. ಜೀವನಕ್ಕೆ ಆಧಾರವಾಗಿದ್ದ ಉದ್ಯೋಗ ಇಲ್ಲ. ಸಂಸಾರ, ಮಕ್ಕಳ ಶಿಕ್ಷಣದ ಜತೆಗೆ ಸಾಲವನ್ನು ತೀರಿಸಬೇಕಾಗಿದೆ. ಹಾಗಾಗಿ, ಕುಟುಂಬದ ಸ್ಥಿತಿಗೆ ಕಾರಣರಾದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಕರವೇ ಜಿಲ್ಲಾ ಸಮಿತಿ ಅಧ್ಯಕ್ಷ ಅನ್ಸಾರ್, ಸುಧೀರ್ ಪೂಜಾರಿ, ಸುನೀಲ್ ಪೂಜಾರಿ ಇದ್ದರು.